ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿನ ಹಿನ್ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ, ಕುಡಿಯುವ ನೀರು, ಉದ್ಯೋಗ ಖಾತ್ರಿ ಹಾಗೂ ಕೆರೆ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯ 55 ಕೆರೆಗಳ ಒತ್ತುವರಿ ತೆರವಿಗೆ ಸೂಚನೆ, ಲಕ್ಷ್ಮೇಶ್ವರ ನೀರಿನ ಕಾಮಗಾರಿಗಳ ಥರ್ಡ್ ಪಾರ್ಟಿ ತನಿಖೆಗೆ ಆದೇಶ
ಕನ್ನಡಪ್ರಭ ವಾರ್ತೆ ಗದಗ
ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿನ ಹಿನ್ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ, ಕುಡಿಯುವ ನೀರು, ಉದ್ಯೋಗ ಖಾತ್ರಿ ಹಾಗೂ ಕೆರೆ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶನಿವಾರ ಗದಗ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಕ್ಷ್ಮೇಶ್ವರ ತಾಲೂಕಿನ ಸುಮಾರು 120 ಗ್ರಾಮಗಳಿಗೆ ಜೆಜೆಎಂ ಯೋಜನೆಯಡಿ ನೀರು ಪೂರೈಸುತ್ತಿರುವುದಾಗಿ ಅಧಿಕಾರಿಗಳು ವರದಿ ನೀಡುತ್ತಿದ್ದರೂ, ವಾಸ್ತವದಲ್ಲಿ ಜನರಿಗೆ ನೀರು ತಲುಪುತ್ತಿಲ್ಲ ಹಾಗೂ ಡಿಬಿಒಟಿ ವ್ಯವಸ್ಥೆಯಲ್ಲೂ ಲೋಪಗಳಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ದೂರಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಅಧಿಕಾರಿಗಳು ಮತ್ತು ಶಾಸಕರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಬೇಕು ಹಾಗೂ ಜಿಪಂ ಸಿಇಒ ಅವರು ತೃತೀಯ ವ್ಯಕ್ತಿ ಸಂಸ್ಥೆಯಿಂದ (ಥರ್ಡ್ ಪಾರ್ಟಿ) ತಪಾಸಣೆ ನಡೆಸಿ ವಾಸ್ತವಿಕ ವರದಿ ಸಲ್ಲಿಸುವಂತೆ ಆದೇಶಿಸಿದರು.
ನೂತನ ಉದ್ಯೋಗ ಖಾತ್ರಿ (ವಿಬಿಜಿ-ರಾಮ್ ಜಿ) ಯೋಜನೆಯಲ್ಲಿ ಜಿಲ್ಲೆ ಕೇವಲ ಶೇ.27ರಷ್ಟು ಪ್ರಗತಿ ಸಾಧಿಸಿದೆ. ಯಳವತ್ತಿ, ಹೆಸರೂರು ಹಾಗೂ ಚಿಕ್ಕಮಣ್ಣೂರು ಪಂಚಾಯಿತಿಗಳಲ್ಲಿ ಪ್ರಗತಿ ಕುಂಠಿತವಾಗಿರುವುದನ್ನು ಪ್ರಸ್ತಾಪಿಸಿದಾಗ, ಹಿಂದಿನ ವೇತನ ಬಾಕಿಯಿಂದ ಹಿನ್ನಡೆಯಾಗಿದ್ದು, ಸೋಮವಾರದಿಂದ 1900 ಕೂಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬರದ ಹಿನ್ನೆಲೆ ಜನರು ಗುಳೆ ಹೋಗದಂತೆ ಸ್ಥಳೀಯವಾಗಿಯೇ ಕೆಲಸ ನೀಡಬೇಕು. ಯೋಜನೆಯಡಿ ತೆರೆದ ಬಾವಿ, ದನದ ಕೊಟ್ಟಿಗೆ, ಕೃಷಿ ಹೊಂಡ ಸೇರಿ 375 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಅಧಿಕಾರಿಗಳು ಮನೆಮನೆಗೆ ತೆರಳಿ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯ ಒಟ್ಟು 205 ಕೆರೆಗಳ ಪೈಕಿ 55 ಕೆರೆಗಳು ಒತ್ತುವರಿಯಾಗಿದ್ದು, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತಕ್ಷಣವೇ ಒತ್ತುವರಿ ತೆರವುಗೊಳಿಸಬೇಕು. ಪಿಡಿಒ ಮತ್ತು ಇಒಗಳು ಮನೆಮನೆಗೆ ತೆರಳಿ ಅರ್ಜಿ ಸಂಗ್ರಹಿಸಿ ಇ-ಸ್ವತ್ತು ವಿತರಣೆ ಚುರುಕುಗೊಳಿಸಬೇಕು. ಮುಂದಿನ ವಾರ ವಿಡಿಯೋ ಸಂವಾದದ ಮೂಲಕ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಒಟ್ಟು ₹10 ಸಾವಿರ ಕೋಟಿ (ಹಾಳಾದ ರಸ್ತೆ ಪುನರ್ ನಿರ್ಮಾಣಕ್ಕೆ ₹7 ಸಾವಿರ ಕೋಟಿ ಹಾಗೂ ಮರು ಡಾಂಬರೀಕರಣಕ್ಕೆ ₹3 ಸಾವಿರ ಕೋಟಿ) ಮೀಸಲಿಡಲಾಗಿದ್ದು, ಪ್ರಸ್ತಾವನೆ ಸಲ್ಲಿಸಿ ಕಾಮಗಾರಿ ಆರಂಭಿಸಲು ಸೂಚಿಸಿದರು. ಇದೇ ವೇಳೆ ಲಕ್ಷ್ಮೇಶ್ವರ ತಾಪಂ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಸಕ ಲಮಾಣಿ ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಪಂ ಸಿಇಒ ಮುಕುಲ್ ಜೈನ್ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲೆಯಲ್ಲಿ ಬರಗಾಲವಿದ್ದು, ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ. ಅಂತರ್ಜಲ ಕುಸಿತ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಪರಿಣಿತರೊಂದಿಗೆ ಪರಿಶೀಲಿಸಿ ಬಗೆಹರಿಸಿ. ಸಭೆಗೆ ತಪ್ಪು ಮಾಹಿತಿ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು.
ಈಶ್ವರ ಖಂಡ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.