ಹುಬ್ಬಳ್ಳಿ:
ಧಾರವಾಡ, ಬಾಗಲಕೋಟ, ಗದಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ 2000ಕ್ಕೂ ಅಧಿಕ ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ನೌಕರರು ಪಾಲ್ಗೊಂಡಿದ್ದಾರೆ. ಊಟದ ಬುತ್ತಿಯೊಂದಿಗೆ ಆಗಮಿಸಿರುವ ಪ್ರತಿಭಟನಾಕಾರರು, ಸಚಿವರ ಕಚೇರಿಯೆದುರೇ ಕುಳಿತು ಊಟ ಕೂಡ ಮಾಡಿದರು. ಎರಡು ಸಲ ಪೊಲೀಸರು, ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಈ ವರೆಗೂ ಸಂಧಾನ ಫಲಕಾರಿಯಾಗಿಲ್ಲ. ಅಹೋರಾತ್ರಿ ಧರಣಿ ಮುಂದುವರಿದಿದೆ.
ಅಂಗನವಾಡಿ, ಆಶಾ, ಅಕ್ಷರ ದಾಸೋಹ ಕಾರ್ಯಕರ್ತರಿಗೆ ಸೂಕ್ತ ಸೇವಾ ಭದ್ರತೆ, ವಿಮಾ ಸೌಲಭ್ಯ ಹಾಗೂ ಇನ್ನಿತರ ಸರ್ಕಾರಿ ಸೌಲಭ್ಯ ನೀಡದೇ ಜೀತ ಪದ್ಧತಿಯ ರೀತಿಯಲ್ಲಿ ದುಡಿಸಿಕೊಳ್ಳುತ್ತಿರುವುದು ಖಂಡನೀಯ. ಕೇಂದ್ರ ಸಚಿವರು ಭರವಸೆ ನೀಡುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಈ ವೇಳೆ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಯಮುನಾ ಗಾಂವಕರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕು. ಶಾಸನಬದ್ಧ ಸವಲತ್ತು ನೀಡದ ಶ್ರಮಶಕ್ತಿ ನೀತಿ-2025ನ್ನು ಕೂಡಲೇ ರದ್ದುಗೊಳಿಸಬೇಕು. ಬರುವ ಬಜೆಟ್‌ನಲ್ಲಿ ಸರ್ಕಾರದ ವಿವಿಧ ಯೋಜನಾ ಕಾರ್ಯಕರ್ತರ ಅನುದಾನ ಹೆಚ್ಚಿಸಬೇಕ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಧ್ಯ ಪ್ರವೇಶಿಸಿ ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.
ವಿವಿಧ ಪ್ರಮುಖ ಬೇಡಿಕೆಗಳು:
ಆಶಾ, ಅಂಗನವಾಡಿ ಹಾಗೂ ಅಕ್ಷರ ದಾಸೋಹ ಕಾರ್ಯಕರ್ತರಿಗೆ ಹೆರಿಗೆ, ಮುಟ್ಟಿನ ರಜೆ ನೀಡಬೇಕು, 56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಬೇಕು, ರಾಷ್ಟ್ರೀಯ ಗ್ರಾಮೀಣ ಆರೋಗ್ಯಅಭಿಯಾನ ಯೋಜನೆಯನ್ನು ಕಾಯಂಗೊಳಿಸಬೇಕು, ಕನಿಷ್ಠ ₹ 15 ಸಾವಿರ ನಿಗದಿತ ವೇತನ ಮತ್ತು ಸಾರಿಗೆ ಭತ್ಯೆ ನೀಡಬೇಕು, 4ಜಿ ಮತ್ತು 5ಜಿ ಸಾಮರ್ಥ್ಯವಿರುವ ಮೊಬೈಲ್ ನೀಡಬೇಕು. ಎಎನ್‌ಎಂ ಮತ್ತು ಆರೋಗ್ಯ ಇಲಾಖೆಯ ಇತರೆ ಕೆಲಸಗಳಿಗೆ ನೇಮಕಾತಿ ಮಾಡುವಾಗ ಆಶಾ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು. ಅಕ್ಷರ ದಾಸೋಹ ನೌಕರರಿಗೆ ಮುಂಬರುವ ಬಜೆಟ್‌ನಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು. ₹ 10000 ನಿವೃತ್ತಿ ವೇತನ ನೀಡಬೇಕು. ಐಎಲ್‌ಸಿ ಶಿಫಾರಸಿನಂತೆ ಉದ್ಯೋಗಸ್ಥರೆಂದು ಪರಿಗಣಿಸಿ, ಶಾಸನ ಬದ್ಧ ಸವಲತ್ತು ನೀಡಬೇಕು. ಬಿಸಿಯೂಟ ನೌಕರರಿಗೆ ಆರೋಗ್ಯ ವಿಮೆ ಹಾಗೂ ಸೇವಾ ಭದ್ರತೆ ನೀಡಬೇಕು. ಅಂಗನವಾಡಿ ಕಾರ್ಯಕರ್ತೆರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.