ಕನ್ನಡಪ್ರಭ ವಾರ್ತೆ ಚಿಂತಾಮಣಿ
ಅಂಬೇಡ್ಕರ್ ರವರ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೇರುವುಗೊಳಿಸುವಂತೆ ದಲಿತಪರ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಪ್ರತಿಭಟನಾಕಾರರೊಂದಿಗೆ ಹಿರಿಯ ದಲಿತ ಮುಖಂಡರು ಸಂಧಾನ ನಡೆಸಿ, ಸಮಸ್ಯೆಯನ್ನು ಒಂದು ವಾರದೊಳಗಾಗಿ ಬಗೆ ಹರಿಸುವುದಾಗಿ ಭರವಸೆ ನೀಡಿರುವ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಳೆದ ನಾಲ್ಕು ತಿಂಗಳುಗಳ ಹಿಂದೆ ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವ ಅಂದಿನಿಂದ ಇಂದಿನವರೆಗೂ ಅಂಬೇಡ್ಕರ್‌ರ ಪುತ್ಥಳಿಗೆ ಕೊಳಕುಪೆಂಡಾಲ್‌ನ್ನು ಸುತ್ತಿ ಅಂಬೇಡ್ಕರ್‌ರಿಗೆ ಅಪಮಾನ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಅವರಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆರುವುಗೊಳಿಸುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದವು.
ದಲಿತ ಮುಖಂಡರಾದ ಗಡ್ಡಂವೆಂಕಟೇಶ್, ಎನ್.ಮುನಿಸ್ವಾಮಿ, ಗೊಲ್ಲಹಳ್ಳಿ ಶಿವಪ್ರಸಾದ್, ಮುನಿಆಂಜಿನಪ್ಪ, ಜಂಗಮಪ್ಪ ಮತಿತ್ತರರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ಒಂದು ವಾರದೊಳಗಾಗಿ ಅಂಬೇಡ್ಕರ್‌ರ ಪುತ್ಥಳಿಗೆ ಸುತ್ತಿರುವ ಕೊಳಕು ಪೆಂಡಾಲ್‌ನ್ನು ತೆರುವಿಗೊಳಿಸಲು ಕ್ರಮವಹಿಸುವುದಾಗಿ ನೀಡಿರುವ ಭರವಸೆ ಹಾಗೂ ಈ ಭರವಸೆ ಈಡೇರದಿದ್ದರೆ ನಾವು ಕೂಡ ನಿಮ್ಮೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳುವುದಾಗಿ ಭರವಸೆ ನೀಡಿದ ನಂತರ ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾತ್ಕಲಿಕವಾಗಿ ಕೈಬಿಡಲಾಯಿತು.
ಒಂದು ವೇಳೆ ಭರವಸೆ ಈಡೇರದಿದ್ದರೆ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳವುದಾಗಿ ದಲಿತ ಮುಖಂಡ ಕವಾಲಿ ವೆಂಕಟರವಣಪ್ಪ, ವಿಜಯನರಸಿಂಹ, ಜನಾರ್ದನ್‌ಬಾಬು, ಜನನಾಗಪ್ಪ, ಎಂ.ವಿ ರಾಮಪ್ಪ, ವಕೀಲ ಗೋಪಿ, ವಿನೋಭಾ ಕಾಲೋನಿ ರಂಗಣ್ಣ, ಶ್ರೀಕಾಂತ್ ರಾವಣ, ವೆಂಕಟಗಿರಿಕೋಟೆ ಆನಂದ್ ಮತ್ತಿತರರು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳದಲ್ಲಿ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಮುರಳಿಧರ್ ಹಾಗೂ ಚಿಂತಾಮಣಿ ನಗರ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ವಿಜಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಫೋಟೋ...........ಚಿಂತಾಮಣಿ ನಗರದ ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿರುವುದು. ಡಿವೈಎಸ್ಪಿ ಮುರಳಿಧರ್ ಮತ್ತಿತರರು ಇದ್ದಾರೆ.