ನೇಹಾ ಹಿರೇಮಠ್ ಪ್ರಕರಣ ಸಿಐಡಿಗೆ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Apr 23, 2024, 12:48 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ನಮ್ಮ ಕಾಲದಲ್ಲಿ ಅಪರಾಧ ಸಂಖ್ಯೆ ಕಡಿಮೆಯಾಗಿದೆ. ಬಿಜೆಪಿ ಆಡಳಿತದಲ್ಲಿ ಹೆಚ್ಚು ಕ್ರೈಮ್ ಆಗಿದೆ. ನಮ್ಮ ಕಾಲದಲ್ಲಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸಿಒಡಿ ತನಿಖೆಗೆ ವಹಿಸಲಾಗುವುದು. ವಿಶೇಷ ನ್ಯಾಯಾಲಯ ಸ್ಥಾಪಿಸಿ ಕಾಲಮಿತಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಅಪರಾಧ ಸಂಖ್ಯೆ ಕಡಿಮೆಯಾಗಿದೆ. ಬಿಜೆಪಿ ಆಡಳಿತದಲ್ಲಿ ಹೆಚ್ಚು ಕ್ರೈಮ್ ಆಗಿದೆ. ನಮ್ಮ ಕಾಲದಲ್ಲಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ. ನಮ್ಮ ಕಾಲದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ತ್ವರಿತವಾಗಿ ಶಿಕ್ಷೆ ಕೊಡಬೇಕು ಅಂತ ವಿಶೇಷ ಕೋರ್ಟ್‌ಗೆ ವಹಿಸಿದ್ದೇವೆ. ಈಗಾಗಲೇ ನಮ್ಮ ಸಚಿವರು, ಕಾರ್ಯಕರ್ತರು ಹಾಗೂ ಸಚಿವ ಎಚ್. ಕೆ.ಪಾಟೀಲ್ ಅವರು ನೇಹಾ ಹಿರೇಮಠ್‌ ಮನೆಗೆ ಭೇಟಿ ನೀಡಿ ಸಾತ್ವಾನ ಹೇಳಿದ್ದಾರೆ. ನಾನು ಧಾರವಾಡಕ್ಕೆ ತೆರಳಿದ ಸಂದರ್ಭದಲ್ಲಿ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಆಗಿ ನರೇಂದ್ರ ಮೋದಿ ಇಷ್ಟು ಕೆಳಮಟ್ಟಕ್ಕೆ ಮಾತನಾಡಬಾರದಿತ್ತು. ಅವರ ಸ್ಥಾನಕ್ಕೆ ಅಗೌರವ ತೋರುವ ರೀತಿ ಮಾತನಾಡಿದ್ದಾರೆ. ಎಲ್ಲಾ ಸಮುದಾಯಕ್ಕೆ ಅವರು ಪ್ರಧಾನಮಂತ್ರಿ. ಸಮಾನವಾಗಿ ಆಸ್ತಿ ಹಂಚಿಕೆ ಆಗಬೇಕು. ಅಧಿಕಾರ ಸಂಪತ್ತು ಸಮಾನ ಹಂಚಿಕೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶದಲ್ಲಿ ಅಧಿಕಾರ ಹಂಚಿಕೆ ಆಗಬೇಕು. ಒಬ್ಬರ ಕೈಯಲ್ಲಿ ಸಂಪತ್ತು ಇರಬಾರದು. ನಿಮ್ಮ ಕೈಗೆ ಏನು ಕೊಟ್ಟರು ಅಂದರೆ ಖಾಲಿ ಚೊಂಬು ಅಂತಾರೆ ಎಂದು ಹಳ್ಳಿಯಲ್ಲಿ ಗಾದೆ ಇದೆ. ಈ ದೇಶದ ಪ್ರಧಾನಿ ನಮ್ಮ ಪರಿಹಾರದ ಹಣ ಕೊಡಲಿಲ್ಲ. ಕಪ್ಪು ಹಣ ತಂದು 15 ಲಕ್ಷ ಹಾಕುತ್ತೇವೆಂದರು, ಆದರೆ ಮಾಡಿದ್ರಾ. ಉದ್ಯೋಗ ಕೊಡುತ್ತೇವೆಂದರು, ಕೊಟ್ರಾ? ಖಾಲಿ ಚೊಂಬು, ಚಿಪ್ಪು ಕೊಟ್ಟಿದ್ದಾರೆ ಅದಕ್ಕೆ ಜಾಹೀರಾತು ಕೊಟ್ಟಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನೀಡುವಂತೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವು. ನಾವು ಮನವಿ ಕೊಟ್ಟು 7 ತಿಂಗಳಾಯ್ತು. ವರದಿ ಕೊಟ್ಟ ಒಂದು ತಿಂಗಳೊಳಗೆ ಪರಿಹಾರ ಕೊಡಬೇಕಿದೆ. ಅಕ್ಟೋಬರ್ ಕೊನೆ ವಾರದಲ್ಲಿ ವರದಿ ಕೊಟ್ಟಿದ್ದೇವೆ. ರಾಜ್ಯದ ನಮ್ಮ ಖಜಾನೆಯಿಂದ ರೈತರಿಗೆ ಎರಡು ಸಾವಿರ ಪರಿಹಾರ ಕೊಟ್ಟಿದ್ದೇವೆ. ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಈ ದೇಶಕ್ಕೆ ಬಿಜೆಪಿ ಡೇಂಜರ್:

ರಾಜ್ಯದಲ್ಲಿ ನಮ್ಮ ಸರ್ಕಾರ ಹೆಣ್ಣು ಮಕ್ಕಳಿಗೆ ಎರಡು ಸಾವಿರ ಕೊಟ್ಟಿದ್ದೇವೆ. ಬಸ್ ನಲ್ಲಿ ಉಚಿತ ಕರೆದುಕೊಂಡು ಹೋಗಿದ್ದೇವೆ ಇದು ಡೇಂಜರಾ. ಸಮಾಜ ಒಡೆಯುವುದು ಡೇಂಜರ್. ನಾವು ಡೇಂಜರ್ ಅಲ್ಲ ಈ ದೇಶಕ್ಕೆ ಬಿಜೆಪಿ ಡೇಂಜರ್ ಎಂದು ಬಿಜೆಪಿ ಜಾಹೀರಾತು ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

ಬಿಜೆಪಿಯಲ್ಲಿ ಯಾರು ಶ್ರೀಮಂತರಿಲ್ವಾ ಯಾರನ್ನು ಏಕೆ ರೇಡ್ ಮಾಡಲ್ಲ. ಯಡಿಯೂರಪ್ಪ, ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ವ. ಅಶೋಕ್, ಶೋಭಾ ಕರಂದ್ಲಾಜೆ ಭ್ರಷ್ಟಾಚಾರ ಮಾಡಿಲ್ವ. ಅವರ ಮೇಲೆ ರೇಡ್ ಮಾಡಲಿ. ನಮ್ಮವರ ಮೇಲೆಯೂ ಕಾನೂನು ಪ್ರಕಾರ ರೇಡ್ ಮಾಡಲಿ. ಯಾರು ಟ್ಯಾಕ್ಸ್ ಕಟ್ಟಿಲ್ಲ, ಕಾನೂನು ಪ್ರಕಾರ ಆಸ್ತಿ ಸಂಪಾದನೆ ಮಾಡಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ತಿರುಗೇಟು ನೀಡಿದರು.

ಈಶ್ವರಪ್ಪ ಬಗ್ಗೆ ಮಾತನಾಡಲ್ಲ, ಅವನ ಬ್ರೈನ್ ಮೆದುಳಿಗೆ ಲಿಂಕ್ ಇಲ್ಲ. ಯಡಿಯೂರಪ್ಪ ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂದಿದ್ದರು ಏನಾಯ್ತು? ಯಡಿಯೂರಪ್ಪ ಯಾವಾಗ ಶಾಸ್ತ್ರ ಹೇಳುವುದು ಕಲಿತರು ಎಂದು ವ್ಯಂಗ್ಯವಾಡಿದರು.

ಸರ್ಕಾರದ ಖಜಾನೆ ಖಾಲಿ ಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರು ಯಾವ ಆಧಾರದ ಮೇಲೆ ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ಮಾಧ್ಯಮದವರು ಪ್ರಶ್ನಿಸಬೇಕು. ಈ ಬಾರಿ ಗ್ಯಾರಂಟಿಗಳಿಗೆ 35 ಸಾವಿರ ಕೋಟಿ ಹಾಗೂ ಮುಂದಿನ ವರ್ಷ 52,009 ಕೋಟಿ ರು. ತೆಗೆದಿರಿಸಲಾಗಿದ್ದು, 1.20 ಲಕ್ಷ ಕೋಟಿ ರು.ಗಳನ್ನು ಅಭಿವೃದ್ಧಿಗೆ ಮೀಸಲಿರಿಸಿದೆ. ಕುಮಾರಸ್ವಾಮಿ ವರು ಕೇವಲ ರಾಜಕೀಯಕ್ಕಾಗಿ ಇಂತಹ ಹೇಳಿಕೆ ನೀಡುತ್ತಾರೆ ಎಂದು ಕುಟುಕಿದರು.

ಲೋಕಸಭೆಗೆ ನಾಮಪತ್ರ ಸಲ್ಲಿಸಿರುವ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ನಾಮಪತ್ರ ವಾಪಾಸು ತೆಗೆದುಕೊಂಡು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ಸಚಿವ ಮಧುಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಎಂ.ಶ್ರೀಕಾಂತ್, ಮರಿಯಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ