ಕೆಸರು ಗದ್ದೆಯಾದ ನೆಕ್ಕಿಲಾಡಿ ಸಂಪರ್ಕ ರಸ್ತೆ

KannadaprabhaNewsNetwork |  
Published : Jul 14, 2026, 03:00 AM IST
 “ಪಂಚಾಯತ್ ಆಡಳಿತಾಧಿಕಾರಿಗಳೇ ದಯವಿಟ್ಟು ಈ ರಸ್ತೆಯಲ್ಲಿ ನಡೆದಾಡಲು ಬನ್ನಿ. ನಿಮಗೆ ಈ ರಸ್ತೆಯಲ್ಲಿ  ನಡೆದಾಡಲು ಹಿತವಾಗುವುದಾದರೆ ನಮಗೂ ಹಿತವಾದೀತು. . .   | Kannada Prabha

ಸಾರಾಂಶ

‘ಪಂಚಾಯಿತಿ ಆಡಳಿತಾಧಿಕಾರಿಗಳೇ ದಯವಿಟ್ಟು ಈ ರಸ್ತೆಯಲ್ಲಿ ನಡೆದಾಡಲು ಬನ್ನಿ. ನಿಮಗೆ ಈ ರಸ್ತೆಯಲ್ಲಿ ನಡೆದಾಡಲು ಹಿತವಾಗುವುದಾದರೆ ನಮಗೂ ಹಿತವಾದೀತು... ದಯವಿಟ್ಟು ವಾಹನದಿಂದ ಇಳಿದು ನಡೆದಾಡಲು ಬನ್ನಿ’ ಇದು ೩೪ನೇ ನೆಕ್ಕಿಲಾಡಿ ಗ್ರಾಪಂ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯಿಂದ ಕಂಗೆಟ್ಟ ಅಬಾಲ ವೃದ್ಧರಾದಿಯಾಗಿ ನಾಗರಿಕ ವಲಯದಿಂದ ಕೇಳಿಬರುವ ಆಕ್ರೋಶದ ನುಡಿ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

‘ಪಂಚಾಯಿತಿ ಆಡಳಿತಾಧಿಕಾರಿಗಳೇ ದಯವಿಟ್ಟು ಈ ರಸ್ತೆಯಲ್ಲಿ ನಡೆದಾಡಲು ಬನ್ನಿ. ನಿಮಗೆ ಈ ರಸ್ತೆಯಲ್ಲಿ ನಡೆದಾಡಲು ಹಿತವಾಗುವುದಾದರೆ ನಮಗೂ ಹಿತವಾದೀತು... ದಯವಿಟ್ಟು ವಾಹನದಿಂದ ಇಳಿದು ನಡೆದಾಡಲು ಬನ್ನಿ’ ಇದು ೩೪ನೇ ನೆಕ್ಕಿಲಾಡಿ ಗ್ರಾಪಂ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯಿಂದ ಕಂಗೆಟ್ಟ ಅಬಾಲ ವೃದ್ಧರಾದಿಯಾಗಿ ನಾಗರಿಕ ವಲಯದಿಂದ ಕೇಳಿಬರುವ ಆಕ್ರೋಶದ ನುಡಿ. ಪ್ರಸಕ್ತ ಹೆದ್ದಾರಿಯು ಚತುಷ್ಪಥವಾಗಿ ಪರಿವರ್ತನೆಗೊಂಡ ಬಳಿಕ ಪಾಡಚಾರಿಗಳ ಪಾಲಿಗೆ ಸುರಕ್ಷಿತ ಸಂಚಾರ ತಾಣವಾಗಿರುವುದು ಉಪ್ಪಿನಂಗಡಿಯ ಕುಮಾರಧಾರಾ ಹಳೆ ಸೇತುವೆ. ಇದರಲ್ಲಿ ಘನ ವಾಹನ ಸಂಚಾರ ನಿಷೇಧಿಸಿರುವ ಕಾರಣ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಪಾದಚಾರಿಗಳು ಇದೇ ಸೇತುವೆ ಮೂಲಕ ಉಪ್ಪಿನಂಗಡಿಗೆ ಸಂಪರ್ಕ ಸಾಧಿಸುತ್ತಾರೆ. ಆದರೆ ಈ ಸೇತುವೆಯ ಸಂಪರ್ಕ ರಸ್ತೆ ನೆಕ್ಕಿಲಾಡಿ ಭಾಗದಲ್ಲಿ ಸಂಪೂರ್ಣ ಗದ್ದೆಯಂತಾಗಿದ್ದು, ನಡೆದಾಡಲು ಅಸಾಧ್ಯವೆನಿಸಿದ ಸ್ಥಿತಿ ಉದ್ಭವಿಸಿದೆ. ಅನಿವಾರ್ಯವಾಗಿ ನಡೆದಾಡಲು ಪ್ರಯತ್ನಿಸಿದಾಗಲೆಲ್ಲ ಕೆಸರು ಮಣ್ಣಿನಲ್ಲಿ ಜಾರಿ ಬೀಳುವ ದೃಶ್ಯಗಳೇ ಇಲ್ಲಿ ನಿತ್ಯ ಕಾಣುವಂತಾಗಿದೆ.

ದ್ವಿಚಕ್ರ ವಾಹನ ಸವಾರರೂ ಸ್ಕಿಡ್ ಆಗಿ ಬೀಳುವುದು ಇಲ್ಲಿ ಸರ್ವೆ ಸಾಮಾನ್ಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಪತ್ರಿಕಾ ವರದಿಗಳೂ ಬಂದರೂ ಪಂಚಾಯಿತಿ ಆಡಳಿತಾಧಿಕಾರಿಗಳು ‘ಇದು ನಮಗೆ ಸಂಬಂಧಿಸಿಲ್ಲ’ ಎಂಬಂತೆ ಮೌನವಾಗಿದ್ದಾರೆ. ಸಮೀಪದಲ್ಲೇ ನಿರ್ಮಿಸಿದ್ದ ಹೊಸ ಸೇತುವೆಯ ಫುಟ್ ಪಾತ್ ನ್ನು ಬಳಸೋಣವೆಂದರೆ, ಸೇತುವೆಯಲ್ಲಿ ಸುರಕ್ಷತಾ ಕಾಮಗಾರಿ ನಡೆಸಿದ ವೇಳೆ ಫುಟ್ ಪಾತ್ ನಲ್ಲಿ ಹಾಕಲಾಗಿರುವ ಕಾಂಕ್ರೀಟ್ ಮಿಶ್ರಣ ಸಹಿತ ಕಸಕಡ್ಡಿಗಳು ಹಾಗೆಯೇ ಉಳಿಸಲಾಗಿದ್ದು, ನಡೆಯಲು ಯೋಗ್ಯವಾಗದ ಸ್ಥಿತಿಯಲ್ಲಿ ಇರಿಸಲಾಗಿದೆ. ಮಾತ್ರವಲ್ಲದೆ ಚತುಷ್ಪಥ ಹೆದ್ದಾರಿಯ ತಡೆಬೇಲಿ ಸೇತುವೆ ಅಂಚಿನ ವರೆಗೆ ಹಾಕಲಾಗಿದ್ದು, ಪಾದಚಾರಿಗಳು ಫುಟ್‌ಪಾತ್ ನ್ನು ಬಳಸಲು ಕೂಡ ಆಗದಂತಾಗಿದೆ. ಈ ಕಾರಣ ಪಾದಚಾರಿಗಳು ನೇರವಾಗಿ ಸೇತುವೆಯಲ್ಲೇ ನಡೆದಾಡಬೇಕಾಗಿದ್ದು, ಪೈಪೋಟಿಗಿಳಿದಂತೆ ವೇಗವಾಗಿ ಸಂಚರಿಸುವ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಶಾಲೆಗೆ ಹೋಗುವ ಎಳೆಯ ಮಕ್ಕಳನ್ನು ಚತುಷ್ಪಥ ರಸ್ತೆಯ ಸೇತುವೆಯಲ್ಲಿ ನಡೆದಾಡಿಸಲು ಹೆತ್ತವರು ಭಯಪಡುತ್ತಿದ್ದಾರೆ.

ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸುವ ಬಗ್ಗೆ ಅಧಿಕಾರಿ ವರ್ಗವನ್ನು ಕ್ರಿಯಾಶೀಲಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿಯವರು ಗಮನ ಹರಿಸಬೇಕಾಗಿದೆ ಎಂದು ಉಪ್ಪಿನಂಗಡಿ ವರ್ತಕ ಸಂಘದ ಕೋಶಾಧಿಕಾರಿ ಲೋಕೆಶ್ ಆಚಾರ್ಯ ಆಗ್ರಹಿಸಿದ್ದಾರೆ.

ಸೇತುವ ದುಃಸ್ಥಿತಿ ಬಗ್ಗೆ ಗ್ರಾಪಂ ಆಡಳಿತಕ್ಕೆ ಖುದ್ದು ಲಿಖಿತ ಮನವಿ ಸಲ್ಲಿಸಿದ್ದ ನೆಕ್ಕಿಲಾಡಿ ನಿವಾಸಿ ಸುದರ್ಶನ್ ಗಾಣಿಗ ಮಾತನಾಡಿ, ಕನಿಷ್ಠ ಜಲ್ಲಿ ಹುಡಿ ತಂದು ಹಾಕಿ, ರಸ್ತೆಯ ಇಕ್ಕೆಲದಲ್ಲಿ ಮಳೆ ನೀರು ಹರಿದು ಹೋಗುವಂತಹ ಚರಂಡಿ ನಿರ್ಮಿಸಿದರೆ ಇಲ್ಲಿ ಸಮಸ್ಯೆ ಬಗೆಹರಿದಂತೆ. ಅದಕ್ಕೂ ಗ್ರಾಪಂ ಆಡಳಿತ ಬಡತನ ತೋರಿದರೆ ನಾವೇನು ಮಾಡಲು ಸಾಧ್ಯ ಎಂದು ಅಸಹಾಯಕತೆ ತೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಗೆ ಉತ್ತಮ ಕಲಾತ್ಮಕ ಹಾಗೂ ಕಮರ್ಷಿಯಲ್ ಚಿತ್ರ: ಈಶ್ವರ ಕೆರನಳ್ಳಿ
ಯತ್ನಾಳರು ಹಿಂದೂ‌-ಮುಸ್ಲಿಂ ಎಂದು ಜಗಳ ಹಚ್ಚುವುದು ಬಿಡಲಿ: ಅಬ್ದುಲ್‌ ಹಮೀದ್ ಮುಶ್ರೀಫ್