ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ: ತಾಲೂಕಿನ ನೆರಬೆಂಚಿ ಗ್ರಾಮದಲ್ಲಿ ಕಳೆದ ಕೆಲ ದಿನದಿಂದ ನೂರಾರು ಜನರಲ್ಲಿ ತೀವ್ರ ಮೈ ಕೈ ನೋವು, ತೀವ್ರ ಜ್ವರ ಕಾಣಿಸಿಕೊಂಡಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಬುಧವಾರ ಗ್ರಾಮದಲ್ಲಿ ಜ್ವರ ಪೀಡಿತ ವ್ಯಕ್ತಿಯೋರ್ವರ ರಕ್ತದ ವರದಿ ಬಂದಿದ್ದು ಚಿಕೂನ್ ಗುನ್ಯ ದೃಢಪಟ್ಟಿದೆ.ಗ್ರಾಮದ ಬೀರಲಿಂಗೇಶ್ವರ ದೇವಾಲಯದಲ್ಲಿ ತಾತ್ಕಾಲಿಕ ಫೀವರ್ ಕ್ಲಿನಿಕ್ ಆರಂಭಿಸಿದ್ದು, ಇದರಲ್ಲಿ 150 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಇವರನ್ನೆಲ್ಲ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮಕ್ಕೆ ಸೂಚನೆ ನೀಡಲಾಗಿದೆಯಲ್ಲದೇ ಜ್ವರ ನಿಯಂತ್ರಣಕ್ಕೆ ವೈದ್ಯರ ತಂಡವನ್ನು ಕಳುಹಿಸಲಾಗಿದೆ.
ಬಿಸಿಯಾದ, ಆರೋಗ್ಯಪೂರ್ಣವಾದ ಆಹಾರ ಹಾಗೂ ಶುದ್ಧ, ಸ್ವಚ್ಛ ನೀರನ್ನು ಸೇವಿಸುವಂತೆ ಸೂಚಿಸಲಾಗಿದೆಯಲ್ಲದೇ, ಗ್ರಾಮಕ್ಕೆ ನೀರು ಪೂರೈಸುವ ವ್ಯವಸ್ಥೆ ಸಹ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್. ತಾಲೂಕು ಆರೋಗ್ಯಾಧಿಕಾರಿ ಆದೇಶ ನೀಡಿದ್ದಾರೆ.ಸೊಳ್ಳೆ ಹಾವಳಿ:
ಗ್ರಾಮದಲ್ಲಿ ಸೊಳ್ಳೆ ಹಾವಳಿ ವಿಪರೀತವಾಗಿದ್ದು, ಸ್ವಚ್ಛತೆಯ ಕೊರತೆ ಕಂಡು ಬರುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲೂ ದೋಶವಿರುವ ಸಾಧ್ಯತೆ ಇರುವುದರಿಂದ ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ ಮತ್ತು ಆರೋಗ್ಯಾಧಿಕಾರಿಗಳು ಕ್ರಮಕ್ಕೆ ಸೂಚಿಸಿದ್ದಾರೆ.ಗುರುವಾರ ತಹಶೀಲ್ದಾರ ರವಿ ಎಸ್. ಅಂಗಡಿ ಮತ್ತು ತಾಲೂಕು ವೈದ್ಯಾಧಿಕಾರಿ ಆನಂದ ಗೋಟೂರ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ಬೀರಲಿಂಗೇಶ್ವರ ದೇವಾಲಯದಲ್ಲಿ ಆರಂಭಿಸಲಾಗಿದ್ದ ತಾತ್ಕಾಲಿಕ ಫೀವರ್ ಕ್ಲಿನಿಕ್ ಬಂದ್ ಮಾಡಿಸಿ ಎಲ್ಲರನ್ನೂ ಆ್ಯಂಬುಲೆನ್ಸ್ ಮೂಲಕ ತಾಲೂಕು, ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಗ್ರಾಮದಲ್ಲಿ ಫಾಗಿಂಗ್ ಕೈಗೊಳ್ಳಬೇಕು. ಸೊಳ್ಳೆ ನಿಯಂತ್ರಣ, ಸ್ವಚ್ಛತೆಗೆ ಅತೀ ಹೆಚ್ಚಿನ ನಿಗಾ ವಹಿಸಬೇಕು. ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಗತ್ಯ ಔಷಧ, ಚಿಕಿತ್ಸೆ ಪೂರೈಸಬೇಕೆಂದು ಹೇಳಿದರಲ್ಲದೇ, ಗ್ರಾಮದ ಹೊರ ವಲಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮದ ಒಳಗಡೆ ಸ್ಥಳಾಂತರಿಸಬೇಕು. ತಕ್ಷಣ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸೂಚಿಸಿದರು.ಗ್ರಾಮದಲ್ಲಿ ಆರಂಭಿಸಲಾದ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದು, ನೀರಿನಲ್ಲಿ ಫ್ಲೋರೈಡ್ ಅಂಶವಿದ್ದು, ಇನ್ನಷ್ಟು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ನೆರಬೆಂಚಿ ಗ್ರಾಮ ಕಂದಕೂರು ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದು, ಪಿಡಿಒ ರಮೇಶ ಬೆಳ್ಳಿಹಾಳ ಅವರಿಗೆ ತಕ್ಷಣ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು ಎಂದರು.ನೆರೆಬೆಂಚಿ ಗ್ರಾಮದಲ್ಲಿ ಸ್ವಚ್ಛತೆ ಕೊರತೆಯಿಂದ ರೋಗವು ಹುಟ್ಟಿಕೊಂಡಿದೆ. ಜನರು ಸ್ವಚ್ಛತೆ ಕಾಪಾಡಬೇಕು. ಶುದ್ಧ ನೀರು ಸೇವಿಸಬೇಕು ಎನ್ನುತ್ತಾರೆ ಟಿಎಚ್ಒ ಡಾ.ಆನಂದ ಗೋಟೂರ.
ಚಿಕೂನ್‌ಗುನ್ಯಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲ ರೋಗಿಗಳ ರಕ್ತದ ತಪಾಸಣೆ ಕೈಗೊಂಡು ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಆರೋಗ್ಯ ಇಲಾಖೆಗೆ ಸೂಚಿಸಿದರು.ಡಿಎಚ್‌ಒ ಲಿಂಗರಾಜು ಭೇಟಿನೆರೆಬೆಂಚಿ ಗ್ರಾಮಕ್ಕೆ ಡಿಎಚ್‌ಒ ಲಿಂಗರಾಜು ಭೇಟಿ ನೀಡಿದರು. ಜ್ವರ, ಮೈ ಕೈನೋವು ರೋಗದಿಂದ ಬಳಲುವವರಿಗೆ ಇಲಾಖೆಯಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಬುಧವಾರ ಚಿಕೂನ್ ಗುನ್ಯಾ ಪಾಸಿಟಿವ್ ಪ್ರಕರಣವೊಂದು ಪತ್ತೆಯಾಗಿದೆ. ಗ್ರಾಪಂನವರು ಫಾಗಿಂಗ್, ಸ್ವಚ್ಛತಾ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಈ ಲಕ್ಷಣಗಳು ಒಂದು ವಾರದ ತನಕ ಮಾತ್ರ ಇರುತ್ತದೆ. ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದರು.
ನೆರೆಬೆಂಚಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಜ್ವರದ ತಿವ್ರತೆ ಹೆಚ್ಚಿದೆ. ರೋಗಿಗಳನ್ನು ತಾಲೂಕಾಸ್ಪತ್ರೆಗೆ ಸೇರಿಸಲು ಸೂಚಿಸಲಾಗಿದೆ. ನೀರು, ನೈರ್ಮಲ್ಯದ ಕುರಿತು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎನ್ನುತ್ತಾರೆ ತಹಸೀಲ್ದಾರ ರವಿ ಅಂಗಡಿ.