ಮಣಿಪಾಲ: ಕಾಯಿ ಬಾಳೆ ಗೊನೆಗಳನ್ನು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಹಣ್ಣು ಮಾಡುತಿದ್ದ ಜಾಲವೊಂದನ್ನು ಉಡುಪಿಯ ಆಹಾರ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ದಾಳಿ ಸಂದರ್ಭ ಅಧಿಕಾರಿಗಳು ಬಾಳೆಕಾಯಿಗಳನ್ನು ಕೃತಕವಾಗಿ ಮಾಗಿಸಲು ಬಳಸುತ್ತಿದ್ದ ವಿಷಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ತಾವು ಅಂತಹ ಯಾವುದೇ ಕಾನೂನಬಾಹಿರ ಕೆಲಸ ಮಾಡುತ್ತಿಲ್ಲ ಎಂದು ಯಾಮಾರಿಸಲು ಪ್ರಯತ್ನಿಸಿದ್ದಾರೆ. ಅವರನ್ನು ಎಸಿ ರಶ್ಮಿ ಅವರು ಸ್ಥಳದಲ್ಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಂತರ ಆರೋಪಿಗಳು ತಪ್ಪನ್ನು ಒಪ್ಪಿಕೊಂಡು, ತಾವು ಈ ಬಾಳೆ ಗೊನೆಗಳನ್ನು ಕಾರ್ಕಳ, ಮೂಡುಬಿದಿರೆ ಮುಂತಾದ ಕಡೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ವಾಹನಗಳಲ್ಲಿ ತುಂಬಿಸಿಟ್ಟಿದ್ದ ಬಾಳೆ ಕಾಯಿಗಳನ್ನು ಮತ್ತು ಹಾನಿಕಾರಕ ರಾಸಾಯನಿಕ ಮತ್ತು ಕೃತಕ ಬಣ್ಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ವಿವೇಕ್, ಉಡುಪಿ ತಹಸೀಲ್ದಾರ್ ಗುರುರಾಜ್ ಹಾಗೂ ವಿವಿಧ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.