ಚಿಕ್ಕಮಗಳೂರು: ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೊಸ ಬಸ್‌ಗಳನ್ನು ಒದಗಿಸುವುದಲ್ಲದೆ, ಚಿಕ್ಕಮಗಳೂರು - ಮೈಸೂರು ನಡುವೆ ಎರಡು ವೋಲ್ವೊ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು, ಇಲ್ಲಿನ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ವ್ಯವಸ್ಥೆಗೂ ಅನುಮೋದನೆ ನೀಡುವುದಾಗಿ ರಾಜ್ಯ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ನೂತನ ವಸತಿ ಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೈಸೂರು ಹಾಗೂ ಚಿಕ್ಕಮಗಳೂರು ನಡುವೆ ವೋಲ್ವೊ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಿಸುವಂತೆ ಶಾಸಕ ಎಚ್.ಡಿ.ತಮ್ಮಯ್ಯ ಅವರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈ ಬಾರಿಯ ಬಜೆಟ್‌ನಲ್ಲಿ ಎರಡು ಸಾವಿರ ಬಸ್‌ಗಳನ್ನು ಒಟ್ಟಾರೆ ನಿಗಮಕ್ಕೆ ಒದಗಿಸಲಾಗಿದ್ದು, ಅವುಗಳಲ್ಲಿ 900 ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ನೀಡಲಾಗುವುದು. ಇನ್ನೂ 2-3 ತಿಂಗಳಲ್ಲಿ ಈ ಬೇಡಿಕೆ ಈಡೇರಲಿದೆ ಎಂದರು.ತಾವು ಸಚಿವರಾದ ಬಳಿಕ ಎರಡೂವರೆ ವರ್ಷಗಳ ಅವಧಿಯಲ್ಲಿ ನಿಗಮಕ್ಕೆ ಸುಮಾರು 5,800 ಬಸ್‌ಗಳನ್ನು ಖರೀದಿಸಲಾಗಿದೆ. ಹಿಂದೆ ನಾಲ್ಕು ವರ್ಷಗಳಲ್ಲಿ ನಾನಾ ಕಾರಣಗಳಿಂದ ಕೆಎಸ್‌ಆರ್‌ಟಿಸಿಯಿಂದ ಬಸ್ ಖರೀದಿಸಿರಲಿಲ್ಲ. ಈ ನಡುವೆ ನಿಗಮಕ್ಕೆ 9 ಸಾವಿರ ಸಿಬ್ಬಂದಿಯನ್ನು ಭರ್ತಿ ಮಾಡಲಾಗಿದೆ. ಒಂದು ಸಾವಿರ ಮಂದಿಯನ್ನು ಅನುಕಂಪದ ಆಧಾರದಲ್ಲಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಇಲ್ಲಿನ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು 20 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. 14 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನಿಲ್ದಾಣಕ್ಕೆ ಶಾಸಕರಾದ ಎಚ್.ಡಿ.ತಮ್ಮಯ್ಯ ಕಾರಣಕರ್ತರು. ಅಲ್ಲದೆ, ಸುಮಾರು 2.30 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ 12 ವಸತಿ ಗೃಹಗಳನ್ನು ಉದ್ಘಾಟಿಸಲಾಗಿದೆ ಎಂದರು.ಈಗಾಗಲೇ 9.15 ಕೋಟಿ ರು. ವೆಚ್ಚದಲ್ಲಿ ತರೀಕೆರೆ ಬಸ್ ನಿಲ್ದಾಣ ಹಾಗೂ 6 ಕೋಟಿ ರು. ವೆಚ್ಚದಲ್ಲಿ ಕಡೂರು ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶೃಂಗೇರಿಯಲ್ಲಿ 8.82 ಕೋಟಿ ರು. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಅನುದಾನ ಒದಗಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ. ಅಲ್ಲದೆ ಬೀರೂರಿನ ಬಸ್ ನಿಲ್ದಾಣವನ್ನು 2.5 ಕೋಟಿ ರು. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ತರೀಕೆರೆಯಲ್ಲಿ ಬಸ್ ಘಟಕ ನಿರ್ಮಾಣಕ್ಕೆ 9 ಕೋಟಿ ರು. ಗಳ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮವನ್ನು ನೀಡಿದ ಜಿಲ್ಲೆ ಇದು. ಜೊತೆಗೆ ತಾವು ಕೂಡ ಈ ಜಿಲ್ಲೆಯವರೇ ಆಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಈ ನಗರಕ್ಕೆ ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂಬುದು ಚಿಕ್ಕಮಗಳೂರು ಜನತೆಯ ಆಶಯವಾಗಿತ್ತು. ರಾಜ್ಯ ಸರ್ಕಾರದ ಆಸಕ್ತಿಯಿಂದ 19.87 ಕೋಟಿ ರು.ಗಳ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರ್ಷಿಕ 57 ಸಾವಿರ ಕೋಟಿ ರು.ಗಳ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಫಲವಾಗಿ ರಾಜ್ಯದ ಸಾರ್ವಜನಿಕರ ಬದುಕಿನ ತಲಾದಾಯದಲ್ಲಿ ಇಡೀ ದೇಶದಲ್ಲಿ ನಮ್ಮ ರಾಜ್ಯ ಮೊದಲನೇ ಸ್ಥಾನದಲ್ಲಿರುವಂತಾಗಿದೆ ಎಂದರು.ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿದರು. ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಮುಖಂಡರಾದ ಕೆ.ಎಸ್.ಶಾಂತೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಉಪಸ್ಥಿತರಿದ್ದರು.ಶಕ್ತಿ ಯೋಜನೆಯಡಿ ನ.17 ರವರೆಗೆ 900 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿರುವ ನಿದರ್ಶನ ಎಲ್ಲೂ ಇಲ್ಲ. ಇದಕ್ಕಾಗಿ ಅನೇಕ ಪ್ರಶಸ್ತಿಗಳು ಬಂದಿದ್ದು, ಸರ್ಕಾರದಿಂದ ಈ ವೆಚ್ಚವನ್ನು ಭರಿಸಲು 15,422 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ.
- ರಾಮಲಿಂಗಾರೆಡ್ಡಿ, ರಾಜ್ಯ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ