ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು 4,399ಕ್ಕೂ ಅಧಿಕ ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ದೇಶದ ಇತಿಹಾಸದಲ್ಲೇ ದೀರ್ಘಾವಧಿ ಆಡಳಿತ ನಡೆಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ಮೂಲಕ ಈ ಹಿಂದೆ ಜವಾಹರಲಾಲ್ ನೆಹರು ಹೊಂದಿದ್ದ ದಾಖಲೆಯನ್ನು ಮುರಿದಿದ್ದಾರೆ. ಉತ್ತಮ ಹಾಗೂ ದಕ್ಷ ಆಡಳಿತ ಮತ್ತು ಜನಪರ ನೀತಿಗಳೇ ಈ ನಿರಂತರ ಯಶಸ್ಸಿಗೆ ಕಾರಣವಾಗಿದ್ದು, 2014ರಿಂದ ನಡೆದ ಪ್ರತಿಯೊಂದು ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಶುದ್ಧ ಕುಡಿಯುವ ನೀರು ತಲುಪಿಸುವಲ್ಲಿ ದೊಡ್ಡ ಸಾಧನೆ ಆಗಿದ್ದು, ಕರ್ನಾಟಕದಲ್ಲಿ 87 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ನೀರು ಒದಗಿಸಲಾಗಿದೆ. ಜನದನ್ ಯೋಜನೆಯಡಿ ರಾಜ್ಯದ 2.12 ಕೋಟಿ ಜನತೆಯನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ತರಲಾಗಿದೆ. ಅದಲ್ಲದೇ, ಪಿಎಂ ಕಿಸಾನ್, ಮುದ್ರಾ ಯೋಜನೆಯಡಿ ಲಕ್ಷಾಂತರ ಜನರಿಗೆ ಯೋಜನೆಗಳ ಸೌಲಭ್ಯಗಳನ್ನು ಒದಗಿಸಿ, ಅಭಿವೃದ್ಧಿ ಜೊತೆಗೆ ಹೊಸ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ವಿಶ್ವ ನಾಯಕರೊಂದಿಗೆ ಉತ್ತಮ ಸಂಬಂಧ ಬೆಳೆಸಿ ಭಾರತದ ಗೌರವ ತಂದು ಕೊಟ್ಟಿದ್ದಾರೆ ಎಂದು ವಿವರಿಸಿದರು.ಬೆಳಗಾವಿಯಲ್ಲಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ವಿಮಾನಗಳ ಸಂಖ್ಯೆ ಕಡಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪರ್ಕ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೂ ಪ್ರಯತ್ನಿಸಲಾಗುತ್ತಿದೆ. ರಾಜ್ಯ ಸರ್ಕಾರವು ರೈಲ್ವೆ ಹಾಗೂ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಅನುದಾನ ನೀಡದಿರುವುದು ಕೆಲವೆಡೆ ಕುಂಠಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ವಿಠ್ಠಲ ಹಲಗೇಕರ್, ಉಪಮೇಯರ್ ಹನುಮಂತ ಕೊಂಗಾಲಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಬಿಜೆಪಿ ವಕ್ತಾರ ಎಂ.ಬಿ.ಜಿರಲಿ, ಸುಭಾಷ ಪಾಟೀಲ, ಸಂಜಯ ಪಾಟೀಲ, ಅರವಿಂದ ಪಾಟೀಲ, ಡಾ.ರವಿ ಪಾಟೀಲ, ಸಚಿನ ಕಡಿ ಇದ್ದರು.