ಜೂ. 20ರಂದು ಕೊಂಕಣ ರೈಲ್ವೆ ಮಾರ್ಗದ ಹೊಸ ಸೌಲಭ್ಯಗಳ ಉದ್ಘಾಟನೆ

KannadaprabhaNewsNetwork |  
Published : Jun 19, 2026, 02:30 AM IST
ಕುಮಟಾ ರೈಲು ನಿಲ್ದಾಣ | Kannada Prabha

ಸಾರಾಂಶ

ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ, ಕುಮಟಾದಲ್ಲಿ ೨ನೇ ಪ್ಲಾಟ್‌ಫಾರ್ಮ್‌ ಹಾಗೂ ಗೋಕರ್ಣ, ಭಟ್ಕಳ ಹಾಗೂ ಮುರ್ಡೇಶ್ವರ ನಿಲ್ದಾಣಗಳಲ್ಲಿ ನಿರ್ಮಿಸಿದ ಪ್ರಯಾಣಿಕ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮ ಜೂ. 20ರಂದು ಮಧ್ಯಾಹ್ನ ೨.೩೦ಕ್ಕೆ ಕುಮಟಾ ಕೊಂಕಣ ರೈಲು ನಿಲ್ದಾಣದಲ್ಲಿ ನಡೆಯಲಿದೆ.

ಕುಮಟಾ: ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ, ಕುಮಟಾದಲ್ಲಿ ೨ನೇ ಪ್ಲಾಟ್‌ಫಾರ್ಮ್‌ ಹಾಗೂ ಗೋಕರ್ಣ, ಭಟ್ಕಳ ಹಾಗೂ ಮುರ್ಡೇಶ್ವರ ನಿಲ್ದಾಣಗಳಲ್ಲಿ ನಿರ್ಮಿಸಿದ ಪ್ರಯಾಣಿಕ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮ ಜೂ. 20ರಂದು ಮಧ್ಯಾಹ್ನ ೨.೩೦ಕ್ಕೆ ಕುಮಟಾ ಕೊಂಕಣ ರೈಲು ನಿಲ್ದಾಣದಲ್ಲಿ ನಡೆಯಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಸಿಎಂಡಿ ಸಂತೋಷಕುಮಾರ ಝಾ ಹಾಗೂ ಇತರ ಅಧಿಕಾರಿಗಳ ಉಪಸ್ಥಿತರಿರುವರು.

ಸೇವಾ ಸಮಿತಿ ಹರ್ಷ: ಈ ಕಾರ್ಯಕ್ರಮ ಜನತೆಯ ಪಾಲಿಗೆ ಸಂತಸದ ಹಾಗೂ ಐತಿಹಾಸಿಕ ಕ್ಷಣ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಬಣ್ಣಿಸಿದೆ.

ಕುಮಟಾದಿಂದ ತಿರುಪತಿಗೆ ನೇರ ರೈಲು ಸಂಪರ್ಕ ಆಗಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರತಿ ಬುಧವಾರ ಮತ್ತು ಶನಿವಾರ ಕುಮಟಾದಿಂದ ಈ ರೈಲು ಸಂಚರಿಸಲಿದ್ದು, ತಿರುಪತಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲಿದೆ. ಈ ಮಹತ್ವದ ಯೋಜನೆಗೆ ಕಾರಣಕರ್ತರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಂಕಣ ರೈಲ್ವೆ ಸಲಹಾ ಸಮಿತಿಯ ಸದಸ್ಯ ಹಾಗೂ ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಹಾಗೂ ಅಧಿಕಾರಿಗಳು ಅಭಿನಂದನೀಯರು. ಕುಮಟಾ ರೈಲು ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್ ಉದ್ಘಾಟನೆಯಿಂದ ಕುಮಟಾ ನಿಲ್ದಾಣವು ಟರ್ಮಿನಲ್ ಸೌಲಭ್ಯ ಹೊಂದಿದ ಪ್ರಮುಖ ರೈಲು ನಿಲ್ದಾಣವಾಗಿ ಹೊರಹೊಮ್ಮಲಿದ್ದು, ಜಿಲ್ಲೆಯ ರೈಲು ಸಂಪರ್ಕಕ್ಕೆ ಹೊಸ ಆಯಾಮ ದೊರೆಯಲಿದೆ.

ಜಿಲ್ಲೆಯ ಅಭಿವೃದ್ಧಿಗೆ ಹೊಸ ಮೈಲಿಗಲ್ಲು: ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಚಿಗುಡ ರೈಲು ಹೊಸ ಮೈಲಿಗಲ್ಲಾಗಲಿದೆ ಎಂದು ರೈಲ್ವೆ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಗಾಂವ್ಕರ್ ಹೇಳಿದರು. ಕಾಚಿಗುಡ-ತಿರುಪತಿ-ಮಂಗಳೂರು ರೈಲನ್ನು ಮುರ್ಡೇಶ್ವರದ ವರೆಗೆ ವಿಸ್ತರಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಯೋಗ ಸ್ಮರಣೀಯ. ಅದಾದ ಬಳಿಕ ಮುರ್ಡೇಶ್ವರ-ತಿರುಪತಿ-ಕಾಚಿಗುಡ ರೈಲನ್ನು ಕುಮಟಾಕ್ಕೆ ವಿಸ್ತರಿಸುವ ಕನಸನ್ನು ಹೊತ್ತು, ಶಾಸಕ ದಿನಕರ ಶೆಟ್ಟಿ ಅವರು ಕೊಂಕಣ ರೈಲ್ವೆ ಅಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿ, ಅದನ್ನು ಕೇಂದ್ರ ರೈಲ್ವೆ ಇಲಾಖೆಗೆ ರವಾನಿಸಿದ್ದರು. ಈ ಪ್ರಯತ್ನಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಹಕಾರವೂ ದೊರೆತಿದ್ದರ ಫಲವಾಗಿ ಮುರ್ಡೇಶ್ವರ - ತಿರುಪತಿ ರೈಲು ಕುಮಟಾ ವರೆಗೂ ವಿಸ್ತರಣೆಯಾಗಿ ಉದ್ಘಾಟನೆಗೊಳ್ಳುತ್ತಿದೆ. ಈ ರೈಲು ಹೊನ್ನಾವರ ನಿಲ್ದಾಣದಲ್ಲಿಯೂ ನಿಲುಗಡೆ ಹೊಂದಲು ಶಾಸಕ ದಿನಕರ ಶೆಟ್ಟಿ ಬೇಡಿಕೆ ಇಟ್ಟಿದ್ದಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಿರುಪತಿಯಿಂದ ಹೊರಡುವ ಈ ರೈಲು, ಬುಧವಾರ ಮತ್ತು ಶನಿವಾರ ಕುಮಟಾದಿಂದ ತಿರುಪತಿಗೆ ಪ್ರಯಾಣ ಬೆಳೆಸಲಿದೆ. ಕರಾವಳಿ ಕರ್ನಾಟಕದ ರೈಲು ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ಈ ಯೋಜನೆ ಭವಿಷ್ಯದಲ್ಲಿ ಇನ್ನಷ್ಟು ರೈಲು ಸೇವೆಗಳ ವಿಸ್ತರಣೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣದಲ್ಲಿ ಶೇ. 40 ಜನರಿಗೆ ಬಯಲು ಶೌಚವೇ ಗತಿ!
ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ಧ: ನಿಸಾರ್ ಅಹಮದ್