ಬಳ್ಳಾರಿ: ಇದೇ ವೇಳೆ ಬಳ್ಳಾರಿ ಜಿಲ್ಲಾ ಪೊಲೀಸರು ಮಾದಕ ವಸ್ತುಗಳ ಅಕ್ರಮ ಜಾಲ ನಿಯಂತ್ರಿಸುವ ಉದ್ದೇಶದಿಂದ ನಾರ್ಕ್ ರಿಪೋರ್ಟರ್ ಎಂಬ ನೂತನ ಡಿಜಿಟಲ್ ವೇದಿಕೆ ಸಾರ್ವಜನಿಕರ ಸೇವೆಗೆ ಬಿಡುಗಡೆ ಮಾಡಿದ್ದಾರೆ.
ಈ ವೆಬ್ ಅಪ್ಲಿಕೇಷನ್ ಶೇ.100ರಷ್ಟು ಗೌಪ್ಯತೆಯ ವ್ಯವಸ್ಥೆ ಹೊಂದಿದ್ದು, ಪ್ರತ್ಯೇಕ ಆ್ಯಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮಾಹಿತಿ ಸಲ್ಲಿಸಲು ಅವಕಾಶವಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ನೇರವಾಗಿ https://narc-reporter-web.emergent.host ಲಿಂಕ್ ಬಳಸಿ ದೂರು ದಾಖಲಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ತಿಳಿಸಿದರು.
ಮಾದಕ ವಸ್ತುಗಳ ಮಾರಾಟ ಅಥವಾ ಖರೀದಿಗೆ ಬಳಸುವ ಆನ್‌ಲೈನ್ ಹಾಗೂ ಸಾಮಾಜಿಕ ಜಾಲತಾಣಗಳ ವಿವರ, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಖಾತೆಗಳು, ಅನುಮಾನಾಸ್ಪದ ವ್ಯಕ್ತಿ, ವಾಹನ, ಸ್ಥಳ, ಅಕ್ರಮ ದಾಸ್ತಾನು ಕೇಂದ್ರಗಳು ಹಾಗೂ ಗಾಂಜಾ ಬೆಳೆಯುತ್ತಿರುವ ಜಮೀನುಗಳ ಮಾಹಿತಿ ಫೋಟೊಗಳ ಸಹಿತ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಲ್ಲಿಸುವ ಮಾಹಿತಿಯು ಹಿರಿಯ ಪೊಲೀಸ್ ಅಧಿಕಾರಿಗಳ ಸುರಕ್ಷಿತ ಆಡಳಿತ ವ್ಯವಸ್ಥೆಗೆ ನೇರವಾಗಿ ತಲುಪಲಿದ್ದು, ಗೌಪ್ಯವಾಗಿ ಪರಿಶೀಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಡಾ.ಸುಮನ್ ಡಿ. ಪೆನ್ನೇಕರ್ ತಿಳಿಸಿದ್ದಾರೆ.ಮಾದಕ ವಸ್ತುಗಳ ಪಿಡುಗು ನಿಯಂತ್ರಿಸುವುದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ. ಇಡೀ ಸಮಾಜದ ಕರ್ತವ್ಯವಾಗಿದೆ. ಯುವಜನತೆಯ ಭವಿಷ್ಯ ರಕ್ಷಿಸಲು ಸಾರ್ವಜನಿಕರು ನಿರ್ಭೀತಿಯಿಂದ ಮಾಹಿತಿ ನೀಡಿ ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.