ಹೊನ್ನಾಳಿಯಲ್ಲಿ ಲಕ್ಷ್ಮಿ ದೇಗುಲ ನೂತನ ಗೋಪುರ ಕಳಸಾರೋಹಣ

KannadaprabhaNewsNetwork | Published : Feb 5, 2025 12:30 AM

ಸಾರಾಂಶ

ತಾಲೂಕಿನ ಹಳೇದೇವರಹೊನ್ನಾಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಾಲಯ, ಶ್ರೀ ಮಾಧವ ರಂಗನಾಥಸ್ವಾಮಿ ದೇವಾಲಯದ ನೂತನ ವಿಮಾನ ಗೋಪುರದ ಕಳಸಾರೋಹಣ ಹಾಗೂ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಮಾಧವ ರಂಗನಾಥನನ ದೇಗುಲದಲ್ಲೂ ಆರಂಭ । ₹45 ಲಕ್ಷದ ರಥ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಹಳೇದೇವರಹೊನ್ನಾಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಾಲಯ, ಶ್ರೀ ಮಾಧವ ರಂಗನಾಥಸ್ವಾಮಿ ದೇವಾಲಯದ ನೂತನ ವಿಮಾನ ಗೋಪುರದ ಕಳಸಾರೋಹಣ ಹಾಗೂ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಫೆ.2 ರಂದು ವಿವಿಧ ದೇವರ ಮೂರ್ತಿಗಳನ್ನು ಆಹ್ವಾನಿಸಿ ಗಣಪತಿ ಪೂಜೆ, ವಾಸುದೇವ ಪುಣ್ಯಹ, ರಕ್ಷಾಬಂಧನ, ಮೃತ್ತಿಕಾ ಸಂಗ್ರಹ, ಅಂಕುರಾರ್ಪಣೆ ಧ್ವಜಾರೋಹಣ, ವಾಸ್ತುಹೋಮ, ಪೂರ್ಣಹುತಿ ಕಾರ್ಯಕ್ರಮಗಳು ಜರುಗಿದವು.

ಫೆ.3 ರಂದು ಶ್ರೀ ಲಕ್ಷ್ಮಿ ಮಾಧವರಂಗನಾಥ ಸ್ವಾಮಿಯ ಕ್ಷೀರಾಭಿಷೇಕ ಹಾಗೂ ನೂತನ ಕಳಶಕ್ಕೆ ಅಭಿಷೇಕ, ಮಹಾ ಪಂಚಾಮೃತ ಅಭಿಷೇಕ, ನೂತನ ರಥಶುದ್ಧಿ, ರಥಾಂಗ ಹೋಮ, ಶ್ರೀ ಸೂಕ್ತ ಹೋಮ, ಆದಿದೇವತಾ ಪ್ರತ್ಯಾದಿ ದೇವತಾ ಹೋಮ, ದಿಗ್ಬಲಿ, ಶ್ರೀ ಮಾಧವ ರಂಗನಾಥಸ್ವಾಮಿ ವರಪೂಜೆೆ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು.

ಫೆ.4 ರಂದು ಪ್ರಾತ:ಕಾಲ ಸುಪ್ರಭಾತ ಸೇವೆ, ಕಳಸಾಸಭಿಷೇಕ, ನೂತನ ರಥಕ್ಕೆ ಕಳ ಸ ಸ್ಥಾಪನೆ, ಶ್ರೀ ಭೂ ನೀಳಾಸಮೇತ ಮಾಧವ ರಂಗನಾಥಸ್ವಾಮಿಯ ದಿವ್ಯ ಕಲ್ಯಾಣೋತ್ಸವ ನಂತರ ಶ್ರೀ ಲಕ್ಷ್ಮಿ ಮಾಧವರಂಗನಾಥ ಸ್ವಾಮಿಯನ್ನು ನೂತನ ಭವ್ಯವಾದ ರಥದಲ್ಲಿರಿಸಿ ಲೋಕಾರ್ಪಣೆ ಹಾಗೂ ಮಹಾರಥೋತ್ಸವ ನಡೆಯಿತು.

ನಂತರ ಶಯ್ನಾಸನ, ದೀಪೋತ್ಸವ ಭೂತನ ಸೇವೆ, ಅವಭೃಥ ಸ್ನಾನ ಕಾರ್ಯಕ್ರಮಗಳು ನೆರವೇರಿದವು. ನಂತರ ಸೇರಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ದೈವ ಪ್ರೇರಣೆಯಿಂದ ರಥ ನಿರ್ಮಾಣ:

ಸ್ವದೇಶಿ ಗ್ರೂಪ್ಪನ ಸಿಇಒ ಆಗಿರುವ ಗ್ರಾಮದ ಯುವಕ ಕೆ.ಪ್ರವೀಣ್ ಕರಿಬಸಪ್ಪ ದೈವಪ್ರೇರಣೆಯಿಂದ ಈ ರಥವನ್ನು ನಿರ್ಮಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ಸಲ್ಲಿಸಿದ್ದಾಗಿ ಹೇಳಿದರು.

ಸ್ವಂತವಾಗಿ ಅಂದಾಜು 45 ಲಕ್ಷ ರು. ವೆಚ್ಚ ಭರಿಸಿ ಹಾಗೂ ಭಕ್ತರ ದೇಣಿಗೆಯಿಂದ ಈ ಭವ್ಯವಾದ ರಥವನ್ನು ಕೆತ್ತನೆ ಮಾಡಿಸಲಾಗಿದೆ. ಈ ರಥವನ್ನು ಸಾಗುವಾನಿ, ಶಿವನಿ, ಹೊನ್ನೆ, ಕಲಗಂಗೆ, ನಂದಿ ಹಾಗೂ ಕರಿಮತ್ತಿಯ ಮರಗಳನ್ನು ಬಳಸಿ ರಥವನ್ನು ನಿರ್ಮಿಸಲಾಗಿದೆ. ಈ ಸುಂದರವಾದ ರಥವನ್ನು ಸಾಗರದ ಶಿಲ್ಪಿ ಯು.ಎಚ್. ಮಂಜುನಾಥ ಉಪ್ಪಾರ್ ಅವರು ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡುವ ಕನಸಿದೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಡಾ. ವರದರಾಜ್, ಗ್ರಾಮದ ಯುವ ಮುಖಂಡರಾದ ಕೆ. ಮಾದಪ್ಪ , ರಂಗನಾಥ್, ಪ್ರಕಾಶ್, ಎಂ.ಎಸ್. ಸುನೀಲ್, ಉಪನ್ಯಾಸಕ ಹಾಲೇಶ್, ಮುಖಂಡರಾದ ನಾಗೇಂದ್ರಪ್ಪ, ಪ್ರಧಾನ ಅರ್ಚಕರು ಇದ್ದರು. ಹೊನ್ನಾಳಿ ಫೋಟೋ 4ಎಚ್.ಎಲ್.ಐ2: ಹೊನ್ನಾಳಿಯ ಹಳೇದೇವರಹೊನ್ನಾಳಿಯಲ್ಲಿ ಭವ್ಯರಥದ ಲೋಕಾರ್ಪಣೆ, ರಥೋತ್ಸವ ನಡೆಯಿತು.

Share this article