ಕೊಪ್ಪಳ ಜಿಲ್ಲೆಯಲ್ಲಿ ರಾತ್ರಿ 10ರಿಂದ ಬೆಳಗಿನ ಜಾವ 4ರ ವರೆಗೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ರಾತ್ರಿ ನಿದ್ದೆಗೆಟ್ಟು ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಭೀಕರ ಬರದ ನಡುವೆ ವಿದ್ಯುತ್ ಸಮಸ್ಯೆ ಕಣ್ಣುಮುಚ್ಚಾಲೆಯಿಂದಾಗಿ ರೈತರು ಹೈರಾಣಾಗಿ ಹೋಗಿದ್ದಾರೆ. ಕೇವಲ ರಾತ್ರಿ ವೇಳೆಯಲ್ಲಿ ಮಾತ್ರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಅನ್ನದಾತರು ನರಕಯಾತನೆ ಅನುಭವಿಸುತ್ತ, ಸರ್ಕಾರ ಶಪಿಸುತ್ತಿದ್ದಾರೆ. ರೈತ ಸಮುದಾಯಕ್ಕೆ ಬರದ ಗಾಯದ ಮೇಲೆ ವಿದ್ಯುತ್ ಸಮಸ್ಯೆಯ ಬರೆ ಎಳೆದಂತಾಗಿದೆ.
ಒಂದು ಕಡೆ ಬರ. ಮತ್ತೊಂದು ಕಡೆ ಬತ್ತುತ್ತಿರುವ ಬೋರ್‌ವೆಲ್. ಉಳಿದಿರುವ ಬೆಳೆ ಕಾಪಾಡಿಕೊಳ್ಳಲು ರೈತರು ಪಂಪ್‌ಸೆಟ್ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ರಾತ್ರಿ 10ರಿಂದ ಬೆಳಗಿನ ಜಾವ 4ರ ವರೆಗೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ರೈತರು ಬೆಳೆ ಉಳಿಸಿಕೊಳ್ಳಲು ನಿದ್ದೆ, ನೆಮ್ಮದಿ ಮಾತ್ರವಲ್ಲ; ಜೀವವನ್ನೇ ಪಣಕ್ಕಿಟ್ಟು ಹೊಲಕ್ಕೆ ತೆರಳುತ್ತಿದ್ದಾರೆ.
ಹಗಲು ಹೊತ್ತಿನಲ್ಲಿ ಹೊಲದಲ್ಲಿರುವ ರೈತ ರಾತ್ರಿ ಮನೆಯತ್ತ ಮರಳಬೇಕು. ಆದರೆ ರಾತ್ರಿ 10 ಗಂಟೆಗೆ ವಿದ್ಯುತ್ ಬಂದ ಕೂಡಲೇ ಮತ್ತೆ ಕತ್ತಲಲ್ಲಿ ಹೊಲದ ದಾರಿ ಹಿಡಿಯಬೇಕು. ಪಂಪ್‌ಸೆಟ್ ಚಾಲನೆ, ನೀರು ಕಟ್ಟುವುದು, ಮೋಟಾರ್ ನೋಡಿಕೊಳ್ಳುವುದು, ವಿದ್ಯುತ್ ಟ್ರಿಪ್ ಆದರೆ ಮತ್ತೆ ಪರಿವರ್ತಕದ ಬಳಿ ಓಡುವುದು. ಹೀಗೆ ಇಡೀ ರಾತ್ರಿ ರೈತನ ಬದುಕು ವಿದ್ಯುತ್ ಕಂಬ ಮತ್ತು ಪಂಪ್‌ಸೆಟ್ ಸುತ್ತಲೇ ಸುತ್ತುತ್ತಿದೆ.
ಅದರಲ್ಲೂ ಹೊಲಗಳಲ್ಲಿ ಹಾವು, ಚೇಳು ಸೇರಿದಂತೆ ವಿಷಕಾರಿ ಹುಳ-ಹುಪ್ಪಡಿಗಳ ಭೀತಿ. ರಾತ್ರಿಯ ವೇಳೆ ಆಳುಗಳೂ ಬರಲು ಹಿಂದೇಟು ಹಾಕುತ್ತಾರೆ. ಪರಿಣಾಮ, ಮನೆಯಲ್ಲಿರುವ ಹೆಂಡತಿ-ಮಕ್ಕಳನ್ನು ಬಿಟ್ಟು ರೈತನೇ ಒಬ್ಬಂಟಿಯಾಗಿ ಹೊಲಕ್ಕೆ ತೆರಳಬೇಕಾಗಿದೆ.
“ನಮ್ ಕಷ್ಟ ಒಂದ್ ಸ್ವಲ್ಪ ನೋಡ್ರಿ...” ಎಂದು ಬೇಳೂರು ಗ್ರಾಮದ ರೈತ ಗ್ಯಾನಪ್ಪ ಮಧ್ಯರಾತ್ರಿಯಲ್ಲಿ ಹೊಲದಲ್ಲೇ ನಿಂತು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
“ಹೆಂಡ್ರು-ಮಕ್ಕಳನ್ನು ಮನೆಯಲ್ಲಿ ಬಿಟ್ಟು ಮಧ್ಯರಾತ್ರಿ ಹೊಲಕ್ಕೆ ಬರಬೇಕು. ಈ ಕತ್ತಲಲ್ಲಿ ಹುಳ-ಹುಪ್ಪಡಿಗಳಿರುತ್ತವೆ. ನೀರು ಹಾಯಿಸಿ ಮರಳಿ ಮನೆಗೆ ಹೋಗುತ್ತೇವೋ ಇಲ್ಲವೋ ಎಂಬ ಭಯ ಇರುತ್ತದೆ. ರೈತನ ಜೀವಕ್ಕೆ ಬೆಲೆ ಇಲ್ಲವೇ? ಹಿಂಗಾದ್ರೆ ರೈತ ಹೇಗೆ ಜೀವನ ಮಾಡಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
ಕ್ರಿಮಿನಾಶಕ ಸಿಂಪಡಣೆ: ವಿದ್ಯುತ್ ಸಮಸ್ಯೆ ನೀರು ಹಾಯಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಲೂ ನೀರು ಅಗತ್ಯ. ಹಗಲು ಪಂಪ್‌ಸೆಟ್ ಚಾಲನೆ ಸಾಧ್ಯವಾಗದ ಕಾರಣ ರೈತರು ಹಾಗೂ ಕೃಷಿ ಕಾರ್ಮಿಕರು ರಾತ್ರಿಯಲ್ಲೇ ಕ್ರಿಮಿನಾಶಕ ಸಿಂಪಡಿಸುವ ಅಪಾಯಕಾರಿ ಕೆಲಸಕ್ಕೆ ಮುಂದಾಗುತ್ತಿದ್ದಾರೆ.
“ಇಂಥ ಸ್ಥಿತಿ ಎಂದೂ ಬಂದಿರಲಿಲ್ಲ. ಹಗಲು ವಿದ್ಯುತ್ ಇಲ್ಲ. ನೀರಿಲ್ಲದೆ ಕ್ರಿಮಿನಾಶಕ ಸಿಂಪಡಿಸಲು ಸಾಧ್ಯವಿಲ್ಲ. ಹೀಗಾಗಿ ರಾತ್ರಿ ಹೊಲಕ್ಕೆ ಬಂದು ಕೆಲಸ ಮಾಡುತ್ತಿದ್ದೇವೆ” ಎಂದು ಕೃಷಿ ಕಾರ್ಮಿಕ ಸಂತೋಷ್ ಬೇಳೂರು ಕಷ್ಟ ತೋಡಿಕೊಂಡಿದ್ದಾರೆ.
ವಿದ್ಯುತ್ ಕಣ್ಣುಮುಚ್ಚಾಲೆ: ಭೀಕರ ಬರದಿಂದ ಈಗಾಗಲೇ ಮಳೆಯಾಶ್ರಿತ ಬೆಳೆಗಳು ಒಣಗಿವೆ. ಬೋರ್‌ವೆಲ್‌ಗಳಲ್ಲೂ ನೀರು ಕುಸಿದಿದೆ. ಉಳಿದಿರುವ ನೀರಾವರಿ ಬೆಳೆಗಳನ್ನು ಉಳಿಸಿಕೊಳ್ಳಲು ದೊರೆಯುತ್ತಿರುವ ಏಳು ಗಂಟೆಯ ವಿದ್ಯುತ್ ಯಾವುದಕ್ಕೂ ಸಾಲುತ್ತಿಲ್ಲ. ಅದರಲ್ಲೂ ಪೂರೈಕೆಯಾಗುವ ವಿದ್ಯುತ್ ನಿರಂತರವಾಗಿಲ್ಲ. ಪದೇ ಪದೇ ಟ್ರಿಪ್ ಆಗುವುದರಿಂದ ರೈತರು ರಾತ್ರಿ ಹೊತ್ತು ಹೊಲದಲ್ಲಿ ಸುತ್ತಾಡಿ ಸುಸ್ತಾಗುತ್ತಿದ್ದಾರೆ.
ವಿದ್ಯುತ್ ಕಂಪನಿ ಏಳು ಗಂಟೆ ವಿದ್ಯುತ್ ನೀಡಿದೆ ಎಂದು ಲೆಕ್ಕ ಹೇಳಬಹುದು; ಆದರೆ ರೈತನ ಹೊಲಕ್ಕೆ ಆ ಏಳು ಗಂಟೆಯಲ್ಲಿ ನಿಜವಾಗಿ ಎಷ್ಟು ಗಂಟೆ ವಿದ್ಯುತ್ ತಲುಪಿದೆ ಎಂಬ ಲೆಕ್ಕ ಯಾರು ಕೊಡುತ್ತಾರೆ?
ನಿದ್ದೆ ಕಸಿದ ವಿದ್ಯುತ್: ರಾತ್ರಿ ಕರೆಂಟ್ ನೀಡುವುದು ರೈತನಿಗೆ ಅನುಕೂಲ ಎಂದು ಕಚೇರಿಯ ಕಡತದಲ್ಲಿ ಲೆಕ್ಕ ಹಾಕಬಹುದು. ಆದರೆ ಮಧ್ಯರಾತ್ರಿ ಹೊಲದಲ್ಲಿ ಒಬ್ಬಂಟಿಯಾಗಿ ನಿಂತಿರುವ ರೈತನಿಗೆ ಮಾತ್ರ ಅದರ ನಿಜವಾದ ಬೆಲೆ ಗೊತ್ತು.
ಒಂದೆಡೆ ಬೆಳೆ ಒಣಗುವ ಆತಂಕ. ಮತ್ತೊಂದೆಡೆ ವಿದ್ಯುತ್ ಕೈಕೊಡುವ ಭೀತಿ. ಇನ್ನೊಂದೆಡೆ ವಿಷಕಾರಿ ಹುಳ-ಹುಪ್ಪಡಿಗಳ ಆತಂಕ. ಇವೆಲ್ಲದರ ನಡುವೆ ರೈತ ಬದುಕಬೇಕಾಗಿದೆ.
ಹಗಲು ವೇಳೆಯಲ್ಲಿ ನೀಡಲಿ: ಸರ್ಕಾರ ರೈತನಿಗೆ ಹಗಲು ವೇಳೆಯಲ್ಲಿ ಸಮರ್ಪಕ, ನಿರಂತರ ವಿದ್ಯುತ್ ನೀಡುವ ವ್ಯವಸ್ಥೆ ಮಾಡಬೇಕು. ಕನಿಷ್ಠ ದಿನಕ್ಕೆ 10 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.