ಹಗಲು ನಿರಂತರ ೭ ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿ

KannadaprabhaNewsNetwork |  
Published : Sep 20, 2026, 03:00 AM IST
ಹಗರಿಬೊಮ್ಮನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಮಿತಿಯ ಪದಾಧಿಕಾರಿಗಳು ಜೆಸ್ಕಾಂ ಉಪ ವಿಭಾಗದ ಎಇಇ ಆರ್.ಹೇಮರೆಡ್ಡಿ ಅವರಿಗೆ ಹಗಲು ವೇಳೆ ೭ತಾಸು ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಶನಿವಾರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಎರಡು ಪಾಳಿಗಳಲ್ಲಿ ವಿದ್ಯುತ್ ಪೂರೈಸುವುದರಿಂದ ರೈತರು ತಮ್ಮ ಪಂಪ್‌ಸೆಟ್‌ ಸಮರ್ಪಕವಾಗಿ ನಿರ್ವಹಿಸಲು ಹಾಗೂ ಬೆಳೆಗಳಿಗೆ ನಿಗದಿತ ಸಮಯಕ್ಕೆ ನೀರುಣಿಸಲು ತೊಂದರೆಯಾಗುತ್ತದೆ

ಹಗರಿಬೊಮ್ಮನಹಳ್ಳಿ: ಎರಡು ಹಂತಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ೬ ಗಂಟೆಗಳ ಕಾಲ ವಿದ್ಯುತ್ ಒದಗಿಸುತ್ತಿರುವ ಸರ್ಕಾರದ ನಿರ್ಧಾರ ರೈತರ ಕೃಷಿ ಬದುಕನ್ನು ಮಾರಕಗೊಳಿಸುವ ಷಡ್ಯಂತ್ರವಾಗಿದೆ. ತೀವ್ರ ಬರಗಾಲದ ನಡುವೆಯೂ ನೀರಾವರಿ ಕೃಷಿ ದಮನಗೊಳಿಸಲು ಸರ್ಕಾರ ಹುನ್ನಾರ ನಡೆಸಿದೆ ಎಂದು ರಾಜ್ಯ ರೈತ ಸಂಘಟನೆಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹಗಲಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ೭ಗಂಟೆಗಳ ಕಾಲ ವಿದ್ಯುತ್ ಒದಗಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಜೆಸ್ಕಾಂಗೆ ಸಲ್ಲಿಸಿದ ಮನವಿಯ ನೇತೃತ್ವ ವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಸ್ತುತ ಕೃಷಿ ಪಂಪ್‌ಸೆಟ್‌ಗಳಿಗೆ ಎರಡು ಪಾಳಿಗಳಲ್ಲಿ ಒಟ್ಟು ೬ ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಎರಡು ಪಾಳಿಗಳಲ್ಲಿ ವಿದ್ಯುತ್ ಪೂರೈಸುವುದರಿಂದ ರೈತರು ತಮ್ಮ ಪಂಪ್‌ಸೆಟ್‌ ಸಮರ್ಪಕವಾಗಿ ನಿರ್ವಹಿಸಲು ಹಾಗೂ ಬೆಳೆಗಳಿಗೆ ನಿಗದಿತ ಸಮಯಕ್ಕೆ ನೀರುಣಿಸಲು ತೊಂದರೆಯಾಗುತ್ತದೆ. ವಿಶೇಷವಾಗಿ ನೀರಾವರಿ ಅವಲಂಬಿತ ಬೆಳೆಗಳ ಮೇಲೆ ಇದು ಪ್ರತಿಕೂಲ ಪರಿಣಾಮದ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಆಂಜನೇಯಲು ಮಾತನಾಡಿ, ರೈತರ ಹಿತದೃಷ್ಟಿಯಿಂದ ಇಲಾಖೆಯು ಅನಗತ್ಯ ವ್ಯತ್ಯಯ ಹಾಗೂ ಕಿರುಕುಳ ನೀಡಿದೆ, ಹಗಲು ವೇಳೆಯಲ್ಲೇ ನಿರಂತರ ೭ ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಒಂದು ವೇಳೆ ಸರ್ಕಾರದಿಂದಲೇ ಎರಡು ಪಾಳಿಗಳಲ್ಲಿ ವಿದ್ಯುತ್ ನೀಡಲು ಆದೇಶ ಬಂದಿದ್ದರೆ ಆ ಆದೇಶದ ಪ್ರತಿ ಸಾರ್ವಜನಿಕವಾಗಿ ಒದಗಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.

ತಾಲೂಕಾಧ್ಯಕ್ಷ ಪಿ. ಬಸವನಗೌಡ ಮಾತನಾಡಿ, ರೈತರ ನ್ಯಾಯಯುತ ಬೇಡಿಕೆ ನಿರ್ಲಕ್ಷಿಸಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಮುಂದುವರಿದರೆ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್. ಹೇಮರೆಡ್ಡಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಬಾಣದ ಶಿವಪ್ಪ, ಕಾರ್ಯದರ್ಶಿ ನಾಗರಾಜ, ಕೆ. ನಿಂಗಪ್ಪ, ಎಚ್.ನಿಂಗರಾಜ, ಎ. ಬಸವರಾಜು, ಆರ್.ಸಕ್ರಿಗೌಡ, ಎನ್. ಲಿಂಗಪ್ಪ, ಕೆ. ಕೊಟ್ರಪ್ಪ, ಜಿ.ಕೊಟ್ರೇಶ್, ಎಚ್.ವೀರೇಶ, ಎಂ.ಚಂದನ್, ಬಿ.ನಿಂಗಪ್ಪ, ಎಚ್. ಹನುಮಂತ, ಹನಸಿ ವೆಂಕಟೇಶ್, ಡಿ.ಕೊಟ್ರೇಶ, ಎಂ. ಮಲ್ಲಿಕಾರ್ಜುನ, ಬಿ. ಪ್ರಕಾಶ್, ಶಿವಕುಮಾರ್, ಕೆ. ಮಲ್ಲಿಕಾರ್ಜುನ, ಪಿ. ಶಿವಲಿಂಗಪ್ಪ ಹಾಗೂ ಇತರ ಪದಾಧಿಕಾರಿಗಳು ಮತ್ತು ರೈತ ಮುಖಂಡರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿರುವವರ ಪೈಕಿ ನಾನೂ ಒಬ್ಬ-ಸಚಿವ ಲಮಾಣಿ
ಪಂಚಮಸಾಲಿ ಸಮಾಜ ಒಡೆಯುವುದನ್ನು ಸಮುದಾಯ ಸಹಿಸುವುದಿಲ್ಲ-ಶಂಕರ ಬಿಸರಹಳ್ಳಿ