ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ತಳಮಟ್ಟದ ಬೆಳೆ ಹಾನಿ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ. ಅಥಣಿ ತಾಲೂಕಿನಲ್ಲಿ ತೀವ್ರ ಸ್ವರೂಪದ ಬರದ ಪರಿಸ್ಥಿತಿ ಗುರುತಿಸಲಾಗಿದ್ದರೆ, ಬೆಳಗಾವಿ ಸೇರಿದಂತೆ 8 ತಾಲೂಕುಗಳಲ್ಲಿ ಮಧ್ಯಮ ಸ್ವರೂಪದ ಅಭಾವದ ಪರಿಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಳೆಯ ಮೋಡಗಳಿಗಾಗಿ ಆಕಾಶದತ್ತ ನೋಡುತ್ತಿದ್ದ ರೈತನ ಕಣ್ಣು ಇದೀಗ ಒಣಗುತ್ತಿರುವ ಬೆಳೆಯತ್ತ ನೆಟ್ಟಿದೆ. ಮುಂಗಾರು ಕೈಕೊಟ್ಟ ಪರಿಣಾಮ ಬೆಳಗಾವಿ ಜಿಲ್ಲೆಯ ಕೃಷಿ ಪ್ರದೇಶಗಳಲ್ಲಿ ಬರದ ಆತಂಕ ಗಾಢವಾಗುತ್ತಿದ್ದು, ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ತಳಮಟ್ಟದ ಬೆಳೆ ಹಾನಿ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ. ಅಥಣಿ ತಾಲೂಕಿನಲ್ಲಿ ತೀವ್ರ ಸ್ವರೂಪದ ಬರದ ಪರಿಸ್ಥಿತಿ ಗುರುತಿಸಲಾಗಿದ್ದರೆ, ಬೆಳಗಾವಿ ಸೇರಿದಂತೆ 8 ತಾಲೂಕುಗಳಲ್ಲಿ ಮಧ್ಯಮ ಸ್ವರೂಪದ ಅಭಾವದ ಪರಿಸ್ಥಿತಿ ಎದುರಾಗಿದೆ.
ಮಳೆ ಕೊರತೆಯ ಹೊಡೆತಕ್ಕೆ ಸಿಲುಕಿರುವ ಹೊಲಗಳಲ್ಲಿ ಬೆಳೆ ಎಷ್ಟರಮಟ್ಟಿಗೆ ಉಳಿದಿದೆ? ರೈತನ ಕೈ ಸೇರಬೇಕಿದ್ದ ಫಸಲು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ? ಬರದ ನೈಜ ಚಿತ್ರಣ ಎಷ್ಟು ಗಂಭೀರವಾಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇದೀಗ ಅಧಿಕಾರಿಗಳ ತಂಡಗಳು ನೇರವಾಗಿ ರೈತರ ಜಮೀನುಗಳಿಗೆ ಇಳಿಯಲಿವೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಸೂಚನೆಯಂತೆ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಭಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ ಹಾಗೂ ಯರಗಟ್ಟಿ ತಾಲೂಕುಗಳನ್ನು ತಳಮಟ್ಟದ ಬೆಳೆ ಹಾನಿ ಪರಿಶೀಲನೆಗೆ ಆಯ್ಕೆ ಮಾಡಲಾಗಿದೆ.ತೀವ್ರ ಬರದ ಪಟ್ಟಿಯಲ್ಲಿ ಅಥಣಿ:
ಜಿಲ್ಲೆಯಲ್ಲೇ ಅಥಣಿ ತಾಲೂಕಿನಲ್ಲಿ ಪರಿಸ್ಥಿತಿ ತೀವ್ರ ಸ್ವರೂಪದಲ್ಲಿದೆ ಎಂದು ಗುರುತಿಸಲಾಗಿದೆ. ಉಳಿದ 8 ತಾಲೂಕುಗಳಾದ ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಭಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ ಹಾಗೂ ಯರಗಟ್ಟಿಯಲ್ಲಿ ಮಧ್ಯಮ ಸ್ವರೂಪದ ಬರ ಪರಿಸ್ಥಿತಿ ಗುರುತಿಸಲಾಗಿದೆ.ಈ ವರ್ಗೀಕರಣದ ಬಳಿಕ ಇದೀಗ ನಡೆಯಲಿರುವ ತಳಮಟ್ಟದ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ. ಅಧಿಕಾರಿಗಳ ತಂಡಗಳು ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿ ಹಾಗೂ ಹಾನಿಯ ಪ್ರಮಾಣವನ್ನು ಸ್ಥಳದಲ್ಲಿಯೇ ಪರಿಶೀಲಿಸಲಿವೆ. ಸಮೀಕ್ಷೆಯ ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತದೆ.ಸೆ.19ರಿಂದ ಸಮೀಕ್ಷೆ:
ಸೆ.17 ಮತ್ತು 18ರಂದು ಸಮೀಕ್ಷಾ ತಂಡಗಳ ರಚನೆ ಹಾಗೂ ಗ್ರಾಮಗಳ ಆಯ್ಕೆ ನಡೆಯಲಿದೆ. ಸೆ.19 ಮತ್ತು 20 ರಂದು ಅಧಿಕಾರಿಗಳು ಜಮೀನುಗಳಿಗೆ ತೆರಳಿ ಪ್ರತ್ಯಕ್ಷ ಪರಿಶೀಲನೆ ನಡೆಸಲಿದ್ದಾರೆ. ಸೆ.21ರಂದು ಅಂತಿಮ ವರದಿ ಸಲ್ಲಿಸುವ ಉದ್ದೇಶ ಹೊಂದಲಾಗಿದೆ. ತಳಮಟ್ಟದ ಸಮೀಕ್ಷೆಯಲ್ಲಿ ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿ ಕಂಡುಬಂದಲ್ಲಿ ಸಂಬಂಧಿತ ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸುವ ಕುರಿತು ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಮುಂದಿನ ನಾಲ್ಕು ದಿನಗಳ ಸಮೀಕ್ಷೆ ರೈತರ ಪಾಲಿಗೆ ನಿರ್ಣಾಯಕವಾಗಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.