ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಿಜೆಪಿ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಗುಂಡ್ಲುಪೇಟೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದು ಗಡಿಜಿಲ್ಲೆಯಲ್ಲಿ ಬಿಜೆಪಿಗೆ ಹೊಸ ಹುರುಪು ಕಂಡುಬಂದಿತು. ವಿಧಾನಸಭಾ ಸೋಲಿನ ಬಳಿಕ ಲೋಕಸಭಾ ಚುನಾವಣೆಗೆ, ಕಾರ್ಯಕರ್ತರಿಗೆ ಈ ಅಧಿಕಾರ ಸ್ವೀಕಾರ ಕಾರ್ಯಕ್ರಮ ಬೂಸ್ಟರ್ ಡೋಸ್ ನಂತಿದ್ದು ಲೋಕ ಚುನಾವಣೆಗೆ ಬಿಜೆಪಿ ಭರ್ಜರಿ ಆರಂಭ ಮಾಡಿದೆ. ನಿಕಟಪೂರ್ವ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ಅವರಿಂದ ಪಕ್ಷದ ಧ್ವಜವನ್ನು ಸಿ.ಎಸ್.ನಿರಂಜನಕುಮಾರ್ ಪಡೆಯುವ ಮೂಲಕ ಅಧಿಕಾರ ಸ್ವೀಕಾರ ಮಾಡಿದರು.ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಸರ್ಕಾರ: ಅಧಿಕಾರ ಸ್ವೀಕರಿಸಿದ ಬಳಿಕ ಸಿ.ಎಸ್. ನಿರಂಜನಕುಮಾರ್ ಮಾತನಾಡಿ ಗ್ಯಾರಂಟಿ ಯೋಜನೆಗಳಿಂದ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅಸ್ತಿತ್ವ ಕಳೆದುಕೊಂಡಿದೆ, ಔಟ್ ಡೇಟ್ ಸರ್ಕಾರವಾಗಿದೆ ಎಂದು ಕಿಡಿಕಾರಿದರು. ಚಾಮರಾಜನಗರದ ನಾಲ್ಕು ಕ್ಷೇತ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿಲ್ಲ, ಆದರೂ ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲಲೇ ಬೇಕಿದ್ದು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ, ಎಲ್ಲಾ ಸವಾಲುಗಳನ್ನು ಮೆಟ್ಟಿ ಪಕ್ಷ ಗೆಲ್ಲಿಸಬೇಕಿದೆ ಎಂದರು. ನಮಗೆ ನರೇಂದ್ರ ಮೋದಿ ಅವರಂಥ ಅದ್ಭುತ ನಾಯಕ ಸಿಕ್ಕಿದ್ದಾರೆ, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಗೆ ಹೊಸ ಹುರುಪು ಬಂದಿದ್ದು ಕಾರ್ಯಕರ್ತರಲ್ಲಿ ಚೈತನ್ಯ ಮೂಡಿದೆ ಎಂದರು. ನಾನು ಸವಾಲಿನ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ. ಪಕ್ಷ ಅಧಿಕಾರದಲ್ಲಿಲ್ಲ, ಜಿಲ್ಲೆಯಲ್ಲಿ ಶಾಸಕರಿಲ್ಲ ಇಂತಹ ಸಂದರ್ಭದಲ್ಲಿ ಮುಂದೆ ಎದುರಾಗುವ ಲೋಕಸಭೆ ಮತ್ತು ಸ್ಥಳೀಯ ಸಂಸ್ಧೆಗಳ ಚುನಾವಣೆ ಗೆಲ್ಲಬೇಕಾಗಿದೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಸಂಘಟನೆ ತುಂಬಾ ಕಷ್ಟಕರವಾಗಿದ್ದು, ಶ್ರಮ ಪಡದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಪಕ್ಷದ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಕೇವಲ ಲೆಟರ್ ಹೆಡ್ ಅಧ್ಯಕ್ಷರಾಗದೆ, ಪಕ್ಷ ಸಂಘಟನೆಗಾಗಿ ದುಡಿಯುವ ಅಧ್ಯಕ್ಷರಾಗಬೇಕು. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರನ್ನು ಬೆಳಸಬೇಕು ಎಂದು ಸಲಹೆ ನೀಡಿದರು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ನೂತನ ಜಿಲ್ಲಾಧ್ಯಕ್ಷರು ಎಲ್ಲರ ವಿಶ್ವಾಸವನ್ನು ಗಳಸಿಕೊಂಡು ಮುನ್ನಡೆಯಬೇಕು.ಯಾವುದೇ ಚಾಡಿ ಮಾತನ್ನು ಕೇಳದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನುಗುರುತಿಸುವ ಕೆಲಸ ಮಾಡಬೇಕು. ಇದರ ಮೂಲಕ ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್.ಮಹೇಶ್, ರಾಜೇಂದ್ರ, ಮಾಜಿ ಶಾಸಕ ಎಸ್.ಬಾಲರಾಜು, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಬಿಜೆಪಿ ಮುಖಂಡರಾದ ಎಸ್. ಮಹದೇವಯ್ಯ, ಪ್ರೀತನ್, ನೂರೊಂದು ಶೆಟ್ಟಿ, ಆರ್. ಸುಂದರ್, ಮಂಗಲ ಶಿವಕುಮಾರ್,ನಗರಸಭಾ ಸದಸ್ಯರಾದ ಆಶಾ, ಮಮತಾ, ಕುುಮುದಾ, ಇತರರು ಇದ್ದರು.