ಜಿಲ್ಲಾ ಸಾಂಸ್ಕೃತಿಕ ರಂಗಮಂದಿರಕ್ಕೆ ನಿರ್ಮಲಾ ಸೀತಾರಾಮನ್ ಚಾಲನೆ

KannadaprabhaNewsNetwork |  
Published : Jun 06, 2026, 02:30 AM IST
ಫೋಟೋವಿವರ- (5ಎಚ್‌ಪಿಟಿ2) ಹೊಸಪಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿ ಸುಮಾರು 5ಕೋಟಿ ರು.ಗಳ ವೆಚ್ಚದ ಜಿಲ್ಲಾ ರಂಗಮಂದಿರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೂಮಿ ಪೂಜೆ ನೆರವೇರಿಸಿದರು | Kannada Prabha

ಸಾರಾಂಶ

ನಗರದ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ನೂತನ ಸಾಂಸ್ಕೃತಿಕ ರಂಗಮಂದಿರ ತಲೆ ಎತ್ತಲಿದೆ.

ಹೊಸಪೇಟೆ: ಜಿಲ್ಲೆಯ ಸಾಂಸ್ಕೃತಿಕ, ರಂಗಭೂಮಿ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಸಂಸದರ ಅನುದಾದಡಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸುಸಜ್ಜಿತ ರಂಗಮಂದಿರಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಚಾಲನೆ ನೀಡಿದರು.

ನಿರ್ಮಿತಿ ಕೇಂದ್ರವು ಇದರ ನಿರ್ಮಾಣದ ಹೊಣೆ ಹೊತ್ತಿದೆ. ಎಸ್‌ಬಿಐ ಸಿಎಸ್‌ಆರ್ ನಿಧಿಯಡಿ ₹99 ಲಕ್ಷ ವೆಚ್ಚದಲ್ಲಿ ರಂಗಮಂದಿರ ಆವರಣದಲ್ಲಿಯೇ ನಿರ್ಮಿಸಲಾಗುವ ಉದ್ಯಾನವನ ಕಾಮಗಾರಿಗೂ ಸಚಿವರು ಚಾಲನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ನೂತನ ಸಾಂಸ್ಕೃತಿಕ ರಂಗಮಂದಿರ ತಲೆ ಎತ್ತಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಇದು ಅತ್ಯಾಧುನಿಕ ವೇದಿಕೆಯಾಗಲಿದೆ. ಹಂಪಿ ಹಾಗೂ ವಿಜಯನಗರದ ಐತಿಹಾಸಿಕ ವಾಸ್ತುಶಿಲ್ಪದ ಪರಂಪರೆಯಿಂದ ಪ್ರೇರಿತವಾಗಲಿದೆ. ಸಂಸ್ಕೃತಿ, ಪ್ರದರ್ಶನ ಮತ್ತು ಸಾಂಸ್ಕೃತಿಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿರುವ ಈ ಸಂಕೀರ್ಣವು ಭವಿಷ್ಯದ ಸಾಂಸ್ಕೃತಿಕ ಪರಿಸರ ವ್ಯವಸ್ಥೆಗೆ ಪ್ರಮುಖ ಕೇಂದ್ರವಾಗಲಿದೆ. ಉದ್ದೇಶಿತ ಜಿಲ್ಲಾಡಳಿತ ಭವನದ ಸಮೀಪದಲ್ಲೇ ಸುಮಾರು ಮೂರು ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಕಲಾ ಸಂಕೀರ್ಣ ನಿರ್ಮಾಣವಾಗಲಿದೆ. ಸದ್ಯ 1.5 ಎಕರೆ ಜಮೀನಿನಲ್ಲಿ ಯೋಜನೆ ಆರಂಭಗೊಳ್ಳಲಿದೆ.

ಜಾಗತಿಕ ಮಟ್ಟದ ಈ ಹೊಸ ಸಾಂಸ್ಕೃತಿಕ ಕೇಂದ್ರದ ನಿರ್ಮಾಣದಿಂದ ಇಲ್ಲಿನ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ, ನಾಟಕ, ಸಾಂಸ್ಕೃತಿಕ ಹಬ್ಬ, ರಂಗ ಚಟುವಟಿಕೆ ಹಾಗೂ ಪ್ರಮುಖ ಸರ್ಕಾರಿ​, ಖಾಸಗಿ ಸಮಾರಂಭಗಳಿಗೆ ಅತ್ಯುತ್ತಮ ವೇದಿಕೆ ದೊರೆಯಲಿದೆ. ನೂತನ ಸಂಕೀರ್ಣದ ವಿಶಿಷ್ಟ ಪ್ರವೇಶ ಮಾರ್ಗವು ಕಲಾ ಪ್ರೇಮಿಗಳಿಗೆ ಹೊಸ ಅನುಭವ ನೀಡಲಿದೆ. ಪ್ರವೇಶ ದ್ವಾರ, ನಂತರ ಕಲ್ಲಿನ ರಥ, ರಂಗಮಂಟಪ, ಪ್ರವೇಶ ಮಂಟಪ, ಕಲಾ ಗ್ಯಾಲರಿ, ಮುಖ್ಯ ಸಭಾಂಗಣ ಇರಲಿದೆ. ರಂಗಮಂದಿರವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ವಿನ್ಯಾಸದೊಂದಿಗೆ ಮುಖ್ಯ ಸಭಾಂಗಣದಲ್ಲಿ 500 ಆಸನಗಳನ್ನೊಳಗೊಂಡಿದ್ದು, ಇದರಲ್ಲಿ 440 ಸಾರ್ವಜನಿಕ ಮತ್ತು 60 ವಿಐಪಿ ಆಸನಗಳು ಸೇರಿವೆ.

120 ಬಾಲ್ಕನಿ ಆಸನಗಳು, 48 ಮಿನಿ ಥಿಯೇಟರ್ ಆಸನಗಳ ವ್ಯವಸ್ಥೆ ಇರಲಿದೆ. ಕಲಾವಿದರ ಸೌಕರ್ಯಕ್ಕಾಗಿ ತಾಲೀಮು ಕೊಠಡಿ, ಎರಡು ಗ್ರೀನ್ ರೂಮ್ಸ್, ಕಲಾವಿದರ ವಸತಿ ಕೊಠಡಿಗಳು, ಆಧುನಿಕ ರೆಕಾರ್ಡಿಂಗ್ ಮತ್ತು ಡಬ್ಬಿಂಗ್ ಸ್ಟುಡಿಯೋಗಳು ಸಹ ಇರಲಿವೆ. ಇದೇ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯೂ ಕಾರ್ಯ ನಿರ್ವಹಿಸಲಿದೆ.

ಈ ವೇಳೆ ಸಂಸದ ಇ.ತುಕಾರಾಂ, ಶಾಸಕ ಎಚ್.ಆರ್. ಗವಿಯಪ್ಪ, ವಿತ್ತ ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಜಿ.ಪಂ. ಸಿಇಒ ಅಕ್ರಂ ಷಾ, ಎಸ್ಪಿ ಎಸ್.ಜಾಹ್ನವಿ ಸೇರಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ಪಾದನೆಯ ಶೇ.70ಕ್ಕೂ ಅಧಿಕ ಕಾಫಿ ರಫ್ತು: ಬಸವರಾಜ್‌
ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಾಸ್ಯಾಸ್ಪದ: ನವೀನ್ ನಾಯಕ್