ನಾಪೋಕ್ಲು: ಕಾಫಿ ಬೆಳೆಗಾರರು ನೇರವಾಗಿ ಯುರೋಪಿಯನ್ ಮಾರುಕಟ್ಟೆಗೆ ಕಾಫಿಯನ್ನು ರಫ್ತು ಮಾಡುತ್ತಿದ್ದರೆ ಅಥವಾ ಕಾಫಿಯನ್ನು ರಫ್ತು ಮಾಡುವ ರಫ್ತುದಾರರಿಗೆ ಮಾರಾಟ ಮಾಡುತ್ತಿದ್ದರೆ ಕಾಫಿ ತೋಟದ ಭೂ ಪ್ರದೇಶದ ಸ್ಥಳಾಂಕ ಅಥವಾ ಬಹುಭುಜ ಆಕಾರ ಅವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಬಸವರಾಜ್ ಹೇಳಿದರು.

ಬಲ್ಲಮಾವಟಿ ಗ್ರಾಪಂ ಸಭಾಂಗಣದಲ್ಲಿ ಕೇಂದ್ರ ಸರ್ಕಾರ, ಕಾಫಿ ಮಂಡಳಿ ಮಡಿಕೇರಿ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಇಂಡಿಯಾ ಕಾಫಿ ಆ್ಯಪ್‌ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.

ಭಾರತದಲ್ಲಿ ಕಾಫಿ ಒಂದು ರಫ್ತು ಆಧರಿತ ಉತ್ಪನ್ನವಾಗಿದ್ದು, ದೇಶದ ಒಟ್ಟು ಉತ್ಪಾದನೆಯ ಶೇ.70ಕ್ಕೂ ಅಧಿಕ ಕಾಫಿಯನ್ನು 120ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ರಫ್ತುಗಳಲ್ಲಿ ಯುರೋಪ್‌ ದೇಶಗಳು ಮುಖ್ಯವಾದ ಮಾರುಕಟ್ಟೆಯಾಗಿದ್ದು, ಭಾರತದ ಗ್ರೀನ್ ಕಾಫಿ ರಫ್ತಿನಲ್ಲಿ ಶೇ. 60ರಷ್ಟು ಪಾಲು ಹೊಂದಿದೆ. ಈಗ ಯುರೋಪಿಯನ್ ಒಕ್ಕೂಟ ಜಾರಿಸಿರುವ ಅರಣ್ಯ ಕಡಿತ ನಿರ್ಬಂಧ ನೀತಿ ಅಡಿಯಲ್ಲಿ ಕಾಫಿಯು ಸೇರ್ಪಡೆಯಾಗಿದ್ದು, ಯುರೋಪಿಯನ್ ಒಕ್ಕೂಟದ ಆಮದುದಾರ ಸಂಸ್ಥೆಗಳು ಸ್ಥಳಾಂಕ ಅಥವಾ ಬಹುಭುಜ ಆಕಾರ ಮಾಹಿತಿ ಬಳಸಿ, ಕಾಫಿ 2020ರ ಡಿ. 31 ನಂತರ ಅರಣ್ಯ ಕಡಿತಗೊಂಡ ಭೂಮಿಯಲ್ಲಿ ಬೆಳೆಯಲ್ಪಟ್ಟಿಲ್ಲ ಎಂಬುದನ್ನು ಪರಿಶೀಲಿಸುತ್ತವೆ ಎಂದರು.

ಭಾರತೀಯ ಕಾಫಿ ಮಂಡಳಿ ಒಂದು ಸರ್ಕಾರಿ ಸಂಸ್ಥೆಯಾಗಿರುವುದರಿಂದ ಇಂಡಿಯಾ ಕಾಫಿ ಆ್ಯಪ್ ಮೂಲಕ ಬೆಳೆಗಾರರು ಸ್ಥಳಾಂಕ ಅಥವಾ ಬಹುಭುಜ ಆಕಾರವನ್ನು ಹಂಚಿಕೊಳ್ಳಬಹುದಾಗಿದೆ ಎಂದರು.ಕಾಫಿ ಬೆಳೆಗಾರರ ತೋಟದ ಗಾತ್ರವು 4 ಹೆಕ್ಟೇರ್‌ಗಿಂತ ಕಡಿಮೆ ಇದ್ದರೆ ಸ್ಥಳಾಂಕ ಸಾಕು. 4 ಹೆಕ್ಟೇರ್ ಅಥವಾ ಹೆಚ್ಚು ಇದ್ದರೆ ಬಹುಭುಜ ಆಕಾರ ಅಗತ್ಯವಿದೆ ಎಂದು ಮಾಹಿತಿ ನೀಡಿದರು.

26-27ನೇ ಸಾಲಿಗೆ ಕಾಫಿ ಮಂಡಳಿ ವತಿಯಿಂದ ಐಸಿಡಿಪಿ ಯೋಜನೆಯಡಿ ಕಾಫಿ ಮರು ನಾಟಿ, ಹನಿ ನೀರಾವರಿಗೆ, ಕಾಫಿ ಗೋದಾಮು, ಕಾಫಿ ಕಣ ನಿರ್ಮಾಣಕ್ಕೆ, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳಿಗೆ ಕೇಂದ್ರ ಕಚೇರಿಯಿಂದ ಸಹಾಯ ಧನದ ಅನುಮೋದನೆ ದೊರೆತಿದ್ದು, 62 ಎಕರೆವರೆಗಿನ ಕಾಫಿ ತೋಟ ಹೊಂದಿರುವ ಎಲ್ಲ ಬೆಳೆಗಾರರು ಅರ್ಜಿ ಸಲ್ಲಿಸಬಹುದು ಎಂದರು.


ಕಾಫಿ ಮಂಡಳಿ ನಾಪೋಕ್ಲು ವಿಭಾಗದ ವಿಸ್ತರಣಾಧಿಕಾರಿ ಸಜಿನ, ಗ್ರಾಪಂ ಮಾಜಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.