ರಾಮನಗರ: ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ವೇದ ವಿದ್ಯಾ ವಿಹಾರದ ವೇದನಾದ ಗುರುಕುಲ ನಿರ್ಮಾಣಕ್ಕೆ ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಆನಂತರ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನೆರವೇರಿದ ಹೋಮ ಹವನಗಳಲ್ಲಿ ನಿರ್ಮಲಾ ಸೀತಾರಾಮನ್ ಕುಟುಂಬ ಸಮೇತ ಪಾಲ್ಗೊಂಡು ವೇದನಾದ ಗುರುಕುಲ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸ್ತ್ರೋಕ್ತವಾಗಿ ಭೂಮಿಪೂಜೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿತ್ತ ಸಚಿವರು, ಕಲ್ಯಾಣಪುರಿ ವೈದಿಕ ಸಭಾದ ಭಾಗವಾಗಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಪ್ರಾರಂಭವಾದ ವೇದನಾದ ಗುರುಕುಲದಲ್ಲಿ ಗೋವಿಂದ ಪ್ರಕಾಶ್ ಭಟ್ ಅವರು ಋಗ್ವೇದವನ್ನು ಕಲಿಸುತ್ತಿದ್ದಾರೆ. ಅವರು ಇನ್ನು ಯಜುರ್‌ವೇದ, ಸಾಮವೇದ ಮತ್ತು ಅಥರ್ವ ವೇದವನ್ನು ಕಲಿಸಲು ಉದ್ದೇಶಿಸಿದ್ದು, ಅದಕ್ಕಾಗಿ ವೇದ ಗುರುಕುಲ ಶಾಲೆಯನ್ನು ನೂತನವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.ಬೆಂಗಳೂರಿನ ಗುರುಕುಲದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ಗುರುಕುಲದ ಅವಶ್ಯಕತೆ ಇತ್ತಾದರೂ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇತ್ತು. ಈ ಭಾಗದಲ್ಲಿ ಗುರುಕುಲ ಪ್ರಾರಂಭಿಸಲು ಭೂಮಿ ಸಿಕ್ಕಿದ್ದು, ಇಲ್ಲಿ ವೇದ ಕಲಿಕಾ ಶಾಲೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.
ಈ ಗ್ರಾಮದಲ್ಲಿ ಒಂದು ಗೊಶಾಲೆಯೂ ಇತ್ತು. ಅದನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಗೋಶಾಲೆಯನ್ನು ಗೋವಿಂದ ಪ್ರಕಾಶ್ ಭಟ್ ಅವರಿಗೆ ಕೊಟ್ಟಿದ್ದು, ಅದನ್ನು ಇಲ್ಲಿಯೇ ಆರಂಭಿಸುತ್ತಿದ್ದಾರೆ. ಗೋಶಾಲೆಗಳು ನಮ್ಮ ಸಂಸ್ಕೃತಿಯ ಒಂದು ಮುಖ್ಯ ಭಾಗ. ಅದನ್ನು ಮುಂದುವರಿಸಬೇಕಾಗಿದೆ. ನಾನು ಸಹ ಗೋಸೇವೆ ಮಾಡುತ್ತೇನೆ ಎಂದು ನಿರ್ಮಲಾ ಸೀತರಾಮನ್ ತಿಳಿಸಿದರು.
ನಾವೆಲ್ಲರೂ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಜಗತ್ತು ತಂತ್ರಜ್ಞಾನದ ಮಡಿಲಲ್ಲಿ ಮುಳುಗಿ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಗುರುಕುಲ ಸಂಸ್ಕೃತಿಯನ್ನು ಉಳಿಸಿಕೊಂಡು ಬರುವುದು ಎಲ್ಲರ ಆದ್ಯ ಕರ್ತವ್ಯ. ಇದರಿಂದ ಸಂಸ್ಕೃತಿ ಜೊತೆಗೆ ಸಂಸ್ಕಾರ ಬೆಳೆಯುತ್ತದೆ ಎಂದು ಹೇಳಿದರು.
20ಕೆಆರ್ ಎಂಎನ್ 1.ಜೆಪಿಜಿ