ಕನ್ನಡಪ್ರಭ ವಾರ್ತೆ ಮಂಡ್ಯ
ಯುವಜನಾಂಗ ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳ ದಾಸರಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.ನಗರದ ವಿವೇಕಾನಂದ ರಂಗಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ನಡೆದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಾರತ ಇಂದು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವದ ಎದುರು ವಿಫುಲವಾಗಿ ಬೆಳೆದುನಿಂತಿದೆ. ಇದನ್ನು ಸಹಿಸದ ವಿದೇಶಿ ಶಕ್ತಿಗಳು ನಶೆಯುಕ್ತ ಸಾಮಗ್ರಿಗಳನ್ನು ವಿಮಾನದ ಮೂಲಕ ದೇಶದ ಯುವ ಜನಾಂಗಕ್ಕೆ ತಲುಪಿಸಿ ರೋಗಗ್ರಸ್ಥರನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಇಂದಿನ ಯುವಜನತೆ ಐಷಾರಾಮಿ ಬದುಕಿಗೆ ಮಾರು ಹೋಗಿ ಶ್ರಮದ ಜೀವನವನ್ನು ತ್ಯಜಿಸಿದ್ದಾರೆ. ಸನ್ಮಾರ್ಗ ಮತ್ತು ಧಾರ್ಮಿಕತೆಗೆ ಬೆನ್ನು ತೋರಿರುವ ಯುವಜನರು ಗಾಂಧೀಜಿ, ಭಗತ್‌ಸಿಂಗ್, ರಾಜ್‌ಗುರು ಅವರಂತಹ ನಿಸ್ವಾರ್ಥ ದೇಶಪ್ರೇಮಿಗಳು ತಂದುಕೊಟ್ಟ ಸ್ವಾತಂತ್ರ್ಯದ ಅರ್ಥವನ್ನು ಕಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದಿನ ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುವ ಪ್ರವೃತ್ತಿಯಿಂದ ದೂರವಾಗುತ್ತಿದ್ದಾರೆ. ಇದು ಅಪಾಯದ ಸಂಸ್ಕೃತಿ. ಭವಿಷ್ಯದಲ್ಲಿ ದುಡಿಯುವ ಶಕ್ತಿ ದೇಶದಲ್ಲಿ ಮರೆಯಾಗಲಿದೆ ಎಂದು ಎಚ್ಚರಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳದ ಮೂಲಕ ವೀರೇಂದ್ರ ಹೆಗ್ಗಡೆಯವರು ಸಂವಿಧಾನದ ಆಶಯಗಳಾದ ಜಾತ್ಯತೀತ, ಧರ್ಮಾತೀತ, ಪ್ರದೇಶಾತೀತ, ಲಿಂಗಾತೀತ ಹಾಗೂ ಭಾಷಾತೀತ ಅಭಿವೃದ್ಧಿಗೆ ಸಹಕಾರಿಯಾಗುವ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಗಾಂಧೀಜಿಯವರ ಆಶಯಗಳಾದ ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಯೋಜನೆಗಳು ಪೂರಕವಾಗಿದೆ. ಅವರ ಯೋಜನೆಗಳ ಫಲಶೃತಿಗೆ ಶ್ರಮಿಸುತ್ತಿರುವ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರ ಸೇವೆ ಅಪರಿಮಿತ ಎಂದು ಬಣ್ಣಿಸಿದರು.ಸಮಾರಂಭವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು. ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹನುಮಂತಯ್ಯ ಕೊಣನೂರು, ಉಪಾಧ್ಯಕ್ಷ ಶ್ರೀಕಂಠಸ್ವಾಮಿ, ಕೋಶಾಧಿಕಾರಿ ಚಂದ್ರು, ಕಾರಸವಾಡಿ ಮಹದೇವು, ಸುಜಾತ ಕೃಷ್ಣ, ಜಿಲ್ಲಾ ಯೋಜನಾಧಿಕಾರಿ ಚೇತನಾ, ತಾಲೂಕು ಯೋಜನಾಧಿಕಾರಿ ಸುರೇಶ್‌ಶೆಟ್ಟಿ ಭಾಗವಹಿಸಿದ್ದರು.