ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೈಗಾರಿಕೆ ಹಾಗೂ ಶಿಕ್ಷಣ ರಂಗದಲ್ಲಿ ಕ್ರಾಂತಿ ನಡೆಸಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.ಎನ್.ವಿನಯ ಹೆಗ್ಡೆ ನಿಧನಕ್ಕೆ ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರ ಸಂತಾಪದ ಮಹಪೂರವೇ ಹರಿದುಬಂದಿದೆ.
ಮಹಾನ್ ಚೇತನ ವಿನಯ ಹೆಗ್ಡೆ:ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯ ಹರಿಕಾರ, ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎನ್. ವಿನಯ ಹೆಗ್ಡೆ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ತೀವ್ರ ಆಘಾತವಾಯಿತು.ರಾಜ್ಯದ ಯುವಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಅವರ ಪಾತ್ರ ಅತಿ ದೊಡ್ಡದು. ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಇತಿಹಾಸದಲ್ಲಿ ಸದಾ ಉಳಿಯುತ್ತದೆ.
ಐವನ್ ಡಿಸೋಜಾ ಸಂತಾಪ:
ಮಂಜುನಾಥ ಭಂಡಾರಿ ಸಂತಾಪ:
ವಿನಯ್ ಹೆಗ್ಡೆ ಅವರು ಶಿಕ್ಷಣ ತಜ್ಞ ಮಾತ್ರವಲ್ಲದೆ ಉದ್ಯಮಿ, ಸಮಾಜ ಸೇವಕರಾಗಿ ಹೆಸರು ಪಡೆದಿದ್ದರು. ಅವರು ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು.‘ನಿಟ್ಟೆ ಎಜುಕೇಶನ್ ಟ್ರಸ್ಟ್’ ಸ್ಥಾಪಿಸಿ ಈ ಶಿಕ್ಷಣ ಸಂಸ್ಥೆಗಳನ್ನು ಮಂಗಳೂರು, ಬೆಂಗಳೂರು ಮತ್ತು ನಿಟ್ಟೆಯಲ್ಲಿ ಒಟ್ಟು 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮಂಜುನಾಥ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ನಿಧನಕ್ಕೆ ದ.ಕ. ಜಿಲ್ಲಾ ಬಿಜೆಪಿ ಸಂತಾಪ ವ್ಯಕ್ತಪಡಿಸಿದೆ.
ತುಳು ಭಾಷೆ, ಸಂಸ್ಕೃತಿಗೆ ಪ್ರೋತ್ಸಾಹ:ಡಾ. ವಿನಯ ಹೆಗ್ಡೆ ಅವರು ತುಳು ಭಾಷೆ ಹಾಗೂ ಸಂಸ್ಕೃತಿಯ ಬಹುದೊಡ್ಡ ಪ್ರೋತ್ಸಾಹಕರಾಗಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅನೇಕ ಯೋಜನೆ, ಕಾರ್ಯಕ್ರಮಗಳಿಗೆ ನಿರಂತರವಾಗಿ ಬೆಂಬಲ ಹಾಗೂ ಪ್ರೋತ್ಸಾಹನೀಡಿದ್ದರು. ಜಿಲ್ಲೆ ಹಾಗೂ ಹೊರಜಿಲ್ಲೆಯ ವಿವಿಧ ತುಳು ಸಂಘ, ಸಂಸ್ಥೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ಸಹಕಾರವನ್ನು ನಿರಂತರವಾಗಿ ನೀಡಿದವರು.
ನಾಡು ಕಂಡ ಶ್ರೇಷ್ಠ ಉದ್ಯಮಿ:ಶಿಕ್ಷಣ, ವೈದ್ಯಕೀಯ, ಉದ್ಯಮ ಕ್ಷೇತ್ರದಲ್ಲಿ ಬೆಳೆದು ಶ್ರೇಷ್ಠ ಮುತ್ಸದ್ಧಿಯಾಗಿ ರಾಷ್ಟ್ರಪ್ರೇಮ, ಸಮಾಜ ಸೇವಾ ಕೈಂಕರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಂತ ಉದಾರ ಹೃದಯಿ ನಿಟ್ಟೆ ವಿನಯ ಹೆಗ್ಡೆಯವರ ಅಗಲಿಕೆ ಭರಿಸಲಾಗದ ನಷ್ಟ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಂತಾಪ ಸೂಚಿಸಿದ್ದಾರೆ.
ಕಳೆದೆರಡು ದಿನದ ಹಿಂದೆಯಷ್ಟೇ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ದರ್ಶನ ಪಡೆದು, ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತೀರ್ಥ ಪ್ರಸಾದ ಸ್ವೀಕರಿಸಿ ಇದೀಗ ಇಹಲೋಕ ತ್ಯಜಿಸಿರುವುದು ಒಂದರ್ಥದಲ್ಲಿ ಇಚ್ಛಾಮರಣಿ ಎಂದು ಅರ್ಥೈಸಬಹುದು ಎಂದರು.ಈ ಹಿಂದೆ ನ್ಯಾಷನಲ್ ಅಥ್ಲೆಟಿಕ್ ಮೀಟ್, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಪೀಠಾರೋಹಣದ 60ನೇ ವರ್ಷಾಚರಣೆ ಪ್ರಯುಕ್ತ ನಡೆದ ಹಿಂದೂ ಸಮಾಜೋತ್ಸವ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ನಡಾವಳಿ, ಉಡುಪಿಯ ಪರ್ಯಾಯ ಹೀಗೆ ಹಲವು ಪ್ರಮುಖ ಕಾರ್ಯಗಳಲ್ಲಿ ವಿನಯ ಹೆಗ್ಡೆ ಯವರೊಂದಿಗೆ ಕಾರ್ಯದರ್ಶಿಯಾಗಿ ಭಾಗವಹಿಸಿರುವ ಅವಕಾಶವನ್ನು ಕಲ್ಕೂರ ಈ ಸಂದರ್ಭ ಸ್ಮರಿಸಿಕೊಂಡಿದ್ದಾರೆ.ಹಿಂದು ಸಮಾಜಕ್ಕೆ ನೋವು: ನಿಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎನ್. ವಿನಯ ಹೆಗ್ಡೆ ಅವರ ನಿಧನ ಹಿಂದೂ ಸಮಾಜಕ್ಕೆ ಅತೀವ ನೋವನ್ನು ಉಂಟುಮಾಡಿದೆ. ಇವರ ನಿಧನಕ್ಕೆ ವಿಶ್ವ ಹಿಂದೂ ಪರಿಷದ್ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಸಿದೆ.ಸಮಾಜದಲ್ಲಿ ಅಶಕ್ತರಿಗೆ ಶಕ್ತಿ ತುಂಬುವ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ಇವರು ಹಿಂದೂ ರುದ್ರಭೂಮಿಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ಗೋ ಶಾಲೆಗಳ ನಿರ್ವಹಣೆಗೆ ಸಹಕಾರ, ಶಾಲೆಗಳ ನಿರ್ಮಾಣ ಸೇರಿದಂತೆ ನೂರಾರು ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಲೆ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಪೋಷಕರಾಗಿ ಕೊಡುಗೈ ದಾನಿಯಾಗಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ವಿನಯ ಹೆಗ್ಡೆ ಅವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ಪರವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ. ಸಂತಾಪದಲ್ಲಿ ತಿಳಿಸಿದ್ದಾರೆ.