ಬಳ್ಳಾರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸದ್ಯಕ್ಕಿಲ್ಲ

KannadaprabhaNewsNetwork |  
Published : Mar 26, 2026, 02:15 AM IST
ಬಳ್ಳಾರಿಯಲ್ಲಿ ಅ.ಭಾ.ಕ.ಸಾಹಿತ್ಯ ಸಮ್ಮೇಳನ ನಡೆಸುವ ಸಂಬಂಧ ಈ ಹಿಂದೆ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಥಳ ವೀಕ್ಷಣೆ ಮಾಡಿದ್ದರು.  | Kannada Prabha

ಸಾರಾಂಶ

ಗಣಿನಗರಿ ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.

ಜಿಲ್ಲೆಯ ಜನಪ್ರತಿನಿಧಿಗಳ ನಿರಾಸಕ್ತಿ, ಹೆಸರಿಗಷ್ಟೇ ಇರುವ ಜಿಲ್ಲಾ ಉಸ್ತುವಾರಿ ಸಚಿವ, ಸಾಹಿತ್ಯ ಸಮ್ಮೇಳನ ದಿನಾಂಕ ನಿಗದಿಗೊಳಿಸಿ ಮುಂದಡಿ ಇಡಬೇಕಾದ ಸರ್ಕಾರದ ನಿಷ್ಕಾಳಜಿ ಪರಿಣಾಮ ಇನ್ನು ಆರೇಳು ತಿಂಗಳುವರೆಗೆ ಸಮ್ಮೇಳನ ನಡೆಯುವ ಯಾವುದೇ ಮುನ್ಸೂಚನೆಗಳು ಕಂಡು ಬರುತ್ತಿಲ್ಲ.

ರಾಜ್ಯ ಸರ್ಕಾರ ಸಹ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ವಿಚಾರದಲ್ಲಿ ಗಂಭೀರವಾಗಿಲ್ಲ. ಹೆಸರಿಗಷ್ಟೇ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಬಳ್ಳಾರಿಗೆ ಒಮ್ಮೆ ಆಗಮಿಸಿ ಜಾಗ ಪರಿಶೀಲನೆ ಮಾಡಿದ್ದು ಬಿಟ್ಟರೆ, ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಅಖಿಲ ಭಾರತ ಸಮ್ಮೇಳನ ಯಶಸ್ವಿಯಾಗಿ ನಡೆಸುವ ಕುರಿತು ಈವರೆಗೆ ಯಾವುದೇ ಪ್ರಯತ್ನಗಳು ನಡೆಸಿಲ್ಲ. ಜಿಲ್ಲೆಯಿಂದ ದೂರ ಉಳಿದು ಹೆಸರಿಗಷ್ಟೇ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಅವರಿಂದ ಸಮ್ಮೇಳನ ನಡೆಯುವ ನಿರೀಕ್ಷೆಯೂ ಮಾಡುವಂತಿಲ್ಲ.

ಸಮ್ಮೇಳನಕ್ಕಾಗಿ ಈವರೆಗೆ ಆಗಿರೋದೇನು?:

ಕಳೆದ 2024ರ ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಜರುಗಿದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88ನೇ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಅದಾದ ಬಳಿಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಹಣ ದುರ್ಬಳಕೆ, ಅಧಿಕಾರ ದುರುಪಯೋಗ ಆರೋಪಗಳು ಕೇಳಿ ಬಂದವು. ಜೋಶಿ ವಿರುದ್ಧ ವಿಚಾರಣೆಯೂ ನಡೆದು, ಪರಿಷತ್ತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗಿದ್ದ ಸಚಿವ ಸ್ಥಾನಮಾನವನ್ನು ಸಹ ಸರ್ಕಾರ ಹಿಂಪಡೆಯಿತು.

ಏತನ್ಮಧ್ಯೆ, ಅಖಿಲ ಭಾರತ ಸಮ್ಮೇಳನ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಸಚಿವರು ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ತಿಳಿಸಿದ್ದರು. ಬಳಿಕ ಸಮ್ಮೇಳನ ವಿಚಾರದಲ್ಲಿ ಸರ್ಕಾರ ಹಾಗೂ ಜಿಲ್ಲಾ ಮಂತ್ರಿಗಳು ಸೇರಿದಂತೆ ಜವಾಬ್ದಾರಿ ಹೊತ್ತ ಜನಪ್ರತಿನಿಧಿಗಳು ನಿಷ್ಕಾಳಜಿ ತೋರಿದರು.

ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿ ರಶ್ಮಿ ಅವರ ಬಳಿಕ ಕೆ.ಎ.ದಯಾನಂದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು. ದಯಾನಂದ ಅವರು ಬಂದ ಬಳಿಕ ಸಮ್ಮೇಳನದ ಚಟುವಟಿಕೆಗಳು ಶುರುಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ದಯಾನಂದ ಅವರನ್ನು ದಾವಣಗೆರೆ ಉಪ ಚುನಾವಣೆಯ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಹೀಗಾಗಿ ಮತ್ತೆ ಸಮ್ಮೇಳನ ದಿನ ನಿಗದಿಯ ನಿರೀಕ್ಷೆಗಳು ಹುಸಿಯಾಗಿದೆ.

ಉಪ ಚುನಾವಣೆಯ ಭರಾಟೆಯಲ್ಲಿ ಸಚಿವರು, ಶಾಸಕರು:

ಸಾಹಿತ್ಯ ಸಮ್ಮೇಳನ ದಿನಾಂಕ ನಿಗದಿಗೊಳಿಸಿ ಸ್ವಾಗತ ಸಮಿತಿ ರಚಿಸಿದ ಬಳಿಕ ಕನಿಷ್ಠ ನಾಲ್ಕು ತಿಂಗಳಾದರೂ ಸಿದ್ಧತೆಗೆ ಬೇಕು. ಆದರೆ, ಸಮ್ಮೇಳನ ಸಂಬಂಧ ಈವರೆಗೆ ಒಂದೇ ಒಂದು ಚಟುವಟಿಕೆ ನಡೆದಿಲ್ಲ. ಬಳ್ಳಾರಿಯಲ್ಲಿ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಸ್ಥಳ ಪರಿಶೀಲನೆ ಮಾಡಿದ್ದು ಬಿಟ್ಟರೆ ಸಮ್ಮೇಳನದ ಸಿದ್ಧತೆಯ ಯಾವ ಕಾರ್ಯವೂ ಶುರುಗೊಂಡಿಲ್ಲ. ರಾಜ್ಯ ಸರ್ಕಾರ ಬಜೆಟ್‌ ಬಳಿಕ ಸಮ್ಮೇಳನ ಕುರಿತು ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿತ್ತು. ಬಜೆಟ್ ಮುಗಿದ ಬಳಿಕ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆ ಭರಾಟೆಯಲ್ಲಿದೆ. ಸಚಿವರು, ಶಾಸಕರು ಸೇರಿದಂತೆ ಇಡೀ ಸರ್ಕಾರವೇ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಬೀಡು ಬಿಟ್ಟಿರುವುದರಿಂದ ಸದ್ಯಕ್ಕೆ ಸಮ್ಮೇಳನ ಕುರಿತು ಯೋಚಿಸುವ ಸಮಯ ಯಾರಿಗೂ ಇಲ್ಲ. ಉಪ ಚುನಾವಣೆ ಬಳಿಕ ಮತ್ಯಾವ ಬೆಳವಣಿಗೆಗಳು ಆಗುತ್ತವೆಯೋ ಗೊತ್ತಿಲ್ಲ. ಹೀಗಾಗಿ ಸದ್ಯಕ್ಕೆ ಸಮ್ಮೇಳನ ನಡೆಸುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ.

ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಚಟುವಟಿಕೆ ನಡೆದಿಲ್ಲ. ಸ್ಥಳ ವೀಕ್ಷಣೆ ಬಿಟ್ಟರೆ ಸಮ್ಮೇಳನದ ಬಗ್ಗೆ ಯಾವ ಕೆಲಸಗಳೂ ಶುರುಗೊಂಡಿಲ್ಲ. ಹೀಗಾಗಿ ಸದ್ಯಕ್ಕೆ ಸಮ್ಮೇಳನ ದಿನಾಂಕ ನಿಗದಿಗೊಳ್ಳುವ ಯಾವ ಲಕ್ಷಣಗಳಂತೂ ನಮಗೂ ಕಾಣುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಗ್ರ ಅಭಿವೃದ್ಧಿಗೆ ₹೧೪.೮೨ ಕೋಟಿ ಬಜೆಟ್ ಮಂಡನೆ
ಸ್ಮಶಾನಕ್ಕೆ ಭೂಮಿ, ದಾರಿ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಸೂಚನೆ