ಹಾವೇರಿ: ತಾಲೂಕಿನ ಭರಡಿ ಹಾಗೂ ಮರಡೂರ ಗ್ರಾಮಗಳ ಸ್ಮಶಾನಭೂಮಿ ಹಾಗೂ ದಾರಿ ಸಮಸ್ಯೆ ಶೀಘ್ರ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ವೇತನ ಪಾವತಿಗೆ ಆದ್ಯತೆ ನೀಡಬೇಕು. ಜತೆಗೆ ಕರ ವಸೂಲಿಗೆ ಹೆಚ್ಚಿನ ಗಮನಹರಿಸಬೇಕು. ಸ್ಮಶಾನದ ಸಮಸ್ಯೆ ಇರುವ ಗ್ರಾಮಗಳಲ್ಲಿ ಹಾಗೂ ಸ್ಮಶಾನಕ್ಕೆ ಹೋಗಲು ದಾರಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಕೂಡಲೇ ಜಮೀನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಆದ್ಯತೆ, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಪಾವತಿ, ಯಾವ ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಮಾಹಿತಿ, ಗುತ್ತಲದಲ್ಲಿ ನೂತನ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ, ಬಾಳಂಬೀಡ ಗ್ರಾಮದಲ್ಲಿ ಎಸ್‌ಸಿ-ಎಸ್‌ಟಿ ಕಾಲನಿಯಲ್ಲಿ ಪಕ್ಕಾ ಗಟಾರ್ ನಿರ್ಮಾಣ ಹಾಗೂ ಹೈ ಮಾಸ್ಟ್‌ ದೀಪ ಅಳವಡಿಕೆ, ಭರಡಿ-ಮರಡೂರ ಗ್ರಾಮದಲ್ಲಿ ಸ್ಮಶಾನಕ್ಕೆ ಜಮೀನು ಹಾಗೂ ಸನ್ಮಾನಕ್ಕೆ ಹೋಗಲು ರಸ್ತೆ, ಮೆಡ್ಲೇರಿ ಗ್ರಾಮದ ಪರಿಶಿಷ್ಟ ಜಾತಿಯ ಕಾಲನಿಯಲ್ಲಿ ಸಣ್ಣ ನೀರಾವರಿ ಇಲಾಖೆಯವರು ನಿರ್ಮಾಣ ಮಾಡಿದ ಕಾಲುವೆಯಲ್ಲಿ ನೀರು ನಿಂತು ತೊಂದರೆಯಾಗುತ್ತಿರುವ ಬಗ್ಗೆ, ವಿವಿಧ ಬ್ಯಾಂಕ್‌ಗಳಲ್ಲಿ ಗ್ಯಾರಂಟಿ ಯೋಜನೆ ಹಣ ಸಾಲಕ್ಕೆ ಜಮೆ ತಡೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರಿಗೆ ನ್ಯಾಯ ಬೆಲೆ ಅಂಗಡಿ ಮಂಜೂರಾತಿ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯ 165 ಹೊರಗುತ್ತಿಗೆ ಸಿಬ್ಬಂದಿ ಪೈಕಿ ಪರಿಶಿಷ್ಟ ಜಾತಿಯ 70 ಹಾಗೂ 19 ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಹಾಗೂ ಜಿಲ್ಲೆಯಲ್ಲಿ 464 ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ 23 ಅಂಗಡಿಗಳು ಪರಿಶಿಷ್ಟ ಜಾತಿ ಹಾಗೂ ಪ. ಪಂಗಡದವರಿಗೆ ಸೇರಿವೆ. ಹೊಸ ನ್ಯಾಯ ಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಗೆ ಗೈರು ಹಾಜರಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ನೋಟಿಸ್ ಕಳುಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಶಿವರಾಜ ಹರಿಜನ, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಹೆಡಿಗ್ಗೊಂಡ, ಸಂಜಯಗಾಂಧಿ ಸಂಜೀವಣ್ಣನವರ, ಎನ್.ಎಂ. ಗಾಳೆಮ್ಮನವರ, ರಮೇಶ ಕೊರವರ, ಜಗದೀಶ್ ಹರಿಜನ ಅಭಿಪ್ರಾಯ ಹಂಚಿಕೊಂಡರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಜನವರಿಯಿಂದ ಮಾರ್ಚ್‌ ವರೆಗೆ 16 ಪ್ರಕರಣಗಳು ದಾಖಲಾಗಿದ್ದು, ₹7.50 ಲಕ್ಷ ಪರಿಹಾರ ಮಂಜೂರ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.


ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ, ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್, ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ಕಲ್ಯಾಣಿ ಕಾಂಬ್ಳೆ, ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡಲಮಠ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರಗಳು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಇತರರಿದ್ದರು.