ಧಾರವಾಡ:

ಲೋಹಿಯಾ ಅವರ ಸಪ್ತ ಕ್ರಾಂತಿಯ ಸೂತ್ರಗಳು ಕನ್ನಡ ರಂಗಭೂಮಿಯ ಮೇಲೆ ನೇರ ಪರಿಣಾಮ ಬೀರದಿದ್ದರೂ ಅದರ ಆಶಯಗಳು ಕನ್ನಡ ನಾಟಕ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಅಗಾಧವಾಗಿ ಬೇರೂರಿವೆ ಎಂದು ನಾಟಕಕಾರ ಡಾ. ಕೆ.ವೈ. ನಾರಾಯಣಸ್ವಾಮಿ ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ರಾಮ ಮನೋಹರ ಲೋಹಿಯಾ ಜನ್ಮದಿನ ಹಾಗೂ ವಿಶ್ವರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ ನಾಟಕೋತ್ಸವ, ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಕಳೆದ ದಶಕದಿಂದ ಅಂಬೇಡ್ಕರ್ ವಾದ ಕನ್ನಡ ರಂಗಭೂಮಿಯಲ್ಲಿ ನೇರ ಪರಿಣಾಮ ಬೀರುತ್ತಿದೆ ಎಂದರು.

ಪ್ರೊ. ಶಿವಾನಂದ ಶೆಟ್ಟರ್ ಮತ್ತು ಅನಸೂಯಾ ಕಾಂಬಳೆ ಮಾತನಾಡಿದರು. ಸವಿತಾ ನಾಗಭೂಷಣ ಸಮನ್ವಯಗೊಳಿಸಿದರು. ಜೋಸೆಫ್ ಮಲ್ಲಾಡಿ ಗೋಷ್ಠಿ ನಿರ್ವಹಿಸಿದರು. ನಂತರದಲ್ಲಿ ರಾಘವೇಂದ್ರ ಪಾಟೀಲರು ರಚಿಸಿರುವ ಮತ್ತೊಬ್ಬ ಮಾಯಿ ಕತೆಯ ಕಥಾಭಿನಯವನ್ನು ಆಟಮಾಟ ತಂಡದ ಕಲಾವಿದರು ನಡೆಸಿದರು.

ಮಕ್ಕಳ ರಂಗಭೂಮಿ ಸಾಧ್ಯತೆಯ ಸವಾಲುಗಳ ಕುರಿತು ಡಾ. ಶ್ರೀಪಾದ ಭಟ್ ವಿಷಯ‌ ಮಂಡಿಸಿದರು. ನಾಟಕವೆಂಬುದು ಮಕ್ಕಳ ಮನೋವಿಕಾಸದ ಮೇಲೆ ಆಗು ಮಾಡುವ ಪರಿಣಾಮಗಳು ಮತ್ತು ಅದಕ್ಕೆ ಬೇಕಾದ ಸಾಹಿತ್ಯಿಕ ಮಾಡೆಲ್ ಗಳ ಕುರಿತು ಮಾತನಾಡಿದರು. ನೀತಿ ಚಿಂತಾಮಣಿಯು ಮಕ್ಕಳನ್ನು ಕೌಟುಂಬಿಕ ನಿಯಮಗಳಿಗೆ ಒಳಪಡಿಸಿದರೆ ರಂಗಭೂಮಿ ಮಕ್ಕಳು ಪ್ರಶ್ನಿಸುವ, ಚೌಕಟ್ಟು ಮೀರಿಕೊಳ್ಳುವ ಸವಾಲು ಹೇಳಿಕೊಡುತ್ತದೆ ಎಂದರು. ಅದಕ್ಕೆ ಪ್ರತಿಕ್ರಿಯೆ ಶಂಕರ ಹಲಗತ್ತಿ ಮತ್ತು ಕಲ್ಲಪ್ಪ ಪೂಜೇರ ನೀಡಿದರು. ವಿಶ್ವೇಶ್ವರಿ ಹಿರೇಮಠ ಸಮನ್ವಯಗೊಳಿಸಿದರು.


ನಾಟಕೋತ್ಸವ ಸಮಾರೋಪ ನುಡಿಗಳನ್ನಾಡಿದ ಡಾ. ಪ್ರಕಾಶ ಗರುಡ, ಲೋಹಿಯಾ ಅವರ ಚಿಂತನೆಯೇ ಸಾಂಸ್ಕೃತಿಕವಾದದ್ದು. ಸಮಾಜವಾದ ಮೊದಲು ನಿನ್ನನ್ನು ನೀ ತಿಳಿ ಎನ್ನುವ ತತ್ವದಲ್ಲಿ ಆರಂಭವಾಗುತ್ತದೆ. ಕಂಪನಿ ನಾಟಕಗಳಲ್ಲಿ ಒಂದಾದ ಹಡೆದವ್ವ ನಾಟಕವೂ ಕೂಡ ಸಮಾಜವಾದ ಚಿಂತನೆಯನ್ನೇ ಒಳಗೊಂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಜೀವ ಕುಲಕರ್ಣಿ, ಯುದ್ಧ ನಡೆಯುತ್ತಿರುವ ಈ ಹೊತ್ತಿನಲ್ಲಿ ನಾವು ನಾಟಕೋತ್ಸವ ಮಾಡುತ್ತಿದ್ದೇವೆ. ಯುದ್ಧ ಕೊನೆಗೊಳ್ಳಬೇಕೆಂಬ ಆಶಯ ನಾಟಕದ್ದಾಗಿರುತ್ತದೆ ಎಂದರು.

ನಾಟಕ ಅಕಾಡೆಮಿ ಸದಸ್ಯರಾದ ಗಾಯತ್ರಿ ಹೆಗ್ಗೋಡು ವಂದಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ನಂತರದಲ್ಲಿ ಮೈಸೂರು ರಂಗಾಯಣದ ಹಿರಿಯ ಕಲಾವಿದರು ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ್ ಅವರ ಎದೆಯ ಹಣತೆ ಕಥಾಸಂಕಲನದ ಆಯ್ದ ಭಾಗಗಳ ಒಮ್ಮೆ ಹೆಣ್ಣಾಗು ನಾಟಕ ಪ್ರದರ್ಶಿಸಿದರು.