ಧಾರವಾಡ:

ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವ ಅಪಾರ ಭಕ್ತರ ಜಯಘೋಷದ ಮಧ್ಯೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ವಿಶೇಷವಾಗಿ ಪುಷ್ಪಗಳಿಂದ ಅಲಂಕರಿಸಲಾಗಿದ್ದ ರಥಕ್ಕೆ ಶ್ರೀಮಠದ ಹಿರಿಯ ಮತ್ತು ಕಿರಿಯ ಶ್ರೀಗಳು ಪೂಜೆ ಸಲ್ಲಿಸಿದರು. ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಮೊರಬ ಜಡಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಕಲಬುರ್ಗಿಯ ಬೃಹನ್ಮಠದ ಪರ್ವತೇಶ್ವರರು, ವಿಜಯನಗರ ನವಲಿಹಿರೇಮಠದ ಶಿವಲಿಂಗರುದ್ರಮುನಿಗಳು, ಚಿಕ್ಕಮಗಳೂರು ಬೃಹನ್ಮಠದ ರೇಣುಕ ಮಹಾಂತರು, ಬೆಳಗಾವಿ ಜಡೆತಲೆ ಮರುಳಸಿದ್ಧರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕರಡಿಮಜಲು, ಡೊಳ್ಳು, ಸಂಬಾಳ ಸೇರಿ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಆರಂಭಗೊಂಡ ರಥೋತ್ಸವ ಪಂಚಗೃಹ ಹಿರೇಮಠದಿಂದ ಹೊರಟು ಇಸ್ಲಾಂ ಧರ್ಮೀಯರ ಪ್ರಾರ್ಥನಾ ಮಂದಿರ, ಅಮ್ಮಿನಬಾವಿ ಮುಖ್ಯಪೇಟೆ ರಸ್ತೆಯಲ್ಲಿ ಸಂಚರಿಸಿ ಕರಡಿಗುಡ್ಡ ರಸ್ತೆಗೆ ಹೊಂದಿಕೊಂಡ ಈಶ್ವರ ದೇವಾಲಯದ ವರೆಗೆ ಹೋಗಿ ಮರಳಿ ಅದೇ ಮಾರ್ಗವಾಗಿ ಶ್ರೀಮಠ ತಲುಪಿತು.

ದಾರಿಯುದ್ದಕ್ಕೂ ಭಕ್ತರು ಅಲಂಕೃತ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಣೆ ಮಾಡಿದರು. ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹಲವಾರು ಗ್ರಾಮಗಳೂ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರದಿಂದಲೂ ಅಪಾರ ಸಂಖ್ಯೆಯ ಭಕ್ತಸ್ತೋಮ ಪಾಲ್ಗೊಂಡಿದ್ದರು.