ಯಲಬುರ್ಗಾ: ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡಲಾಗಿದ್ದು, ಒಟ್ಟು ₹೧೪.೮೨ಕೋಟಿ ಬಜೆಟ್ ಮಂಡನೆಗೆ ಅನುಮೋದಿಸಲಾಗಿದೆ ಎಂದು ಪಪಂ ಆಡಳಿತಾಧಿಕಾರಿ,ತಹಸೀಲ್ದಾರ ಪ್ರಕಾಶ ನಾಶಿ ತಿಳಿಸಿದರು.
ಪಟ್ಟಣದ ಪಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಪಪಂನ ೨೦೨೬-೨೭ನೇ ಸಾಲಿನ ಆಯವ್ಯಯ (ಬಜೆಟ್) ಮಂಡಿಸಿ ಮಾತನಾಡಿದರು. ₹೩.೪ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ಆಸ್ತಿ,ನೀರು, ಜಾಹೀರಾತು,ಉದ್ಯಮ, ಮಾರುಕಟ್ಟೆ, ಮಳಿಗೆ ಬಾಡಿಗೆ, ಎಸ್ಎಫ್‌ಸಿ, ವಿದ್ಯುತ್ ಮತ್ತು ವೇತನ ಅನುದಾನ, ಕಂದಾಯ ಸ್ವೀಕೃತ ಸೇರಿ ೬ನೇ ಹಣಕಾಸು, ಮುಕ್ತನಿಧಿ, ಕುಡಿಯುವ ನೀರು, ವಿಶೇಷ ಅನುದಾನ, ಎಸ್‌ಸಿಪಿ, ಟಿಎಸ್ಪಿ,ನೌಕರರ ವೇತನ ಸೇರಿದಂತೆ ಇನ್ನಿತರ ವೆಚ್ಚಗಳಿಗೆ ಅನುದಾನ ಮೀಸಲಿರಿಸಲಾಗಿದೆ. ಜತೆಗೆ ಸಂಪನ್ಮೂಲಗಳ ಕ್ರೂಢೀಕರಣಕ್ಕೆ ವಿಶೇಷ ಒತ್ತು ಕೊಡಲಾಗಿದೆ ಎಂದರು.ಸಿಎಂ ಆರ್ಥಿಕ ಸಲಹೆಗಾರ,ಶಾಸಕ ಬಸವರಾಜ ರಾಯರಡ್ಡಿ ಪಟ್ಟಣದ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಬೀದಿ ದೀಪ,ಬಸ್ ನಿಲ್ದಾಣ,ಪುಟ್‌ಪಾತ್ ನಿರ್ಮಾಣಕ್ಕೆ ₹೩ ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಪಟ್ಟಣದ ಜನತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಸೇವೆ ಸಲ್ಲಿಸಲು ಸೂಚಿಸಿದ್ದು, ಬೇಸಿಗೆ ಪ್ರಾರಂಭವಾಗಿದ್ದರಿಂದ ಕುಡಿಯುವ ನೀರಿನ ಅಭಾವ ಆಗದಂತೆ ನೋಡಿಕೊಳ್ಳಬೇಕು. ತಿಂಗಳಲ್ಲಿ ೨ ಬಾರಿ ನೀರು ಪರೀಕ್ಷೆ ಮಾಡಿಸಿ ಸಾರ್ವಜನಿಕ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು.ಎಲ್ಲ ವಾರ್ಡ್‌ಗಳಲ್ಲಿ ಸಮರ್ಪಕ ನೀರು ಪೂರೈಕೆ, ಚರಂಡಿ ಸ್ವಚ್ಚತೆ, ವಿದ್ಯುತ್ ಪೂರೈಕೆ ದುರಸ್ತಿ ಮಾಡಬೇಕು ಎಂದು ಸೂಚಿಸಿದರು.
ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಕಳೆದ ವರ್ಷ ತೆರಿಗೆ ಸಂಗ್ರಹಣೆಯಲ್ಲಿ ಸರ್ಕಾರ ₹ ೮೨.೫೮ ಲಕ್ಷ ಗುರಿ ನಿಗದಿಪಡಿಸಿದ್ದು, ಇದರಲ್ಲಿ ₹೧.೧೩ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿಯೇ ಯಲಬುರ್ಗಾ ಪಪಂ ಪ್ರಥಮ ಸ್ಥಾನ ಪಡೆದಿದೆ. ₹೧.೩೭ಕೋಟಿ ವೆಚ್ಚದಲ್ಲಿ ಪಪಂಗೆ ನೂತನ ಜೆಸಿಬಿ, ೪ ಟಿಪ್ಪರ್ ಖರೀದಿಸಲಾಗುವುದು.ನಿವಾಸಿಗಳು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿಸಬೇಕು ಎಂದರು.ವೀಕ್ಷಣೆ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪಪಂ ಕಟ್ಟಡ ಹಾಗೂ ತರಕಾರಿ ಮಾರುಕಟ್ಟೆ ಕಾಮಗಾರಿ ತಹಸೀಲ್ದಾರ,ಮುಖ್ಯಾಧಿಕಾರಿ ವೀಕ್ಷಣೆ ನಡೆಸಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಬಳಿಕ ಹಳೇ ಜಿಪಂ ಕಚೇರಿ ಜಾಗದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದರು.
ಈ ಸಂದರ್ಭ ಪಪಂ ಸಿಬ್ಬಂದಿ ಎಚ್.ರಾಮಣ್ಣ, ಸುಮಾ ಕಂಚಿ, ರಮೇಶ ಬೆಲೇರಿ, ನಾರಾಯಣ ಗಂಗಾಖೇಡ, ಯಂಕಣ್ಣ ಜೋಶಿ, ರವಿ ಭಾಸ್ಕರ, ಸುಭಾಷ ಭಾವಿಮನಿ, ರವಿ ಫೊತೇದಾರ, ಯಂಕಣ್ಣ ಜೋಶಿ, ಶಿವಕುಮಾರ ಸಾಧರ, ಶ್ರವಣಕುಮಾರ, ರೇವಣಪ್ಪ ಹಿರೇಕುರಬರ, ಶರಣಮ್ಮ ಪೂಜಾರ, ಎಚ್.ಎಚ್.ಕುರಿ ಇದ್ದರು.