ಬಳ್ಳಾರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪಕ್ಷದ ಮುಖಂಡರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ನಿರಾಕರಿಸಿದ್ದಾರೆ.
ಅನುಮತಿ ಪಡೆಯದೆ ಪ್ರತಿಭಟನೆ: ಎರಡು ಪ್ರಕರಣಗಳ ದಾಖಲಾತಿ ವಿರೋಧಿಸಿ ಅ.5ರಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ನಾಯ್ಡು ನೇತೃತ್ವದಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ಸುಮಾರು 250ರಿಂದ 300 ಕಾರ್ಯಕರ್ತರು ಪೂರ್ವ ಲಿಖಿತ ಅನುಮತಿ ಪಡೆಯದೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯ ಕುರಿತು ಮುಂಚಿತವಾಗಿ ಮಾಹಿತಿ ಲಭ್ಯವಾಗಿದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಪ್ರತಿಭಟನೆಯನ್ನು ನಗರದ ರಾಯಲ್ ಸರ್ಕಲ್‌ನಲ್ಲಿ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ಪ್ರಕರಣಗಳು ದಾಖಲಾಗಿರುವ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವುದಾಗಿ ಹೇಳಿಕೆ ನೀಡಿದ್ದರು. ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ರಾಯಲ್ ಸರ್ಕಲ್‌ನಿಂದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯತ್ತ ತೆರಳಲು ಮುಂದಾಗಿದ್ದರು. ಈ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯುವ ಉದ್ದೇಶದಿಂದ ಠಾಣೆಗೆ ಮುತ್ತಿಗೆ ಹಾಕಲು ಮುಂದಾದವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಎಸ್ಪಿ ವಿವರಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದ ಬಳಿಕ ಬಿಜೆಪಿ ಮುಖಂಡರು ತಮ್ಮ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತ ಸುದ್ದಿಗಳು ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದ್ದವು. ಆದರೆ, ಪ್ರತಿಭಟನೆಯ ಆರಂಭದಿಂದ ಅಂತ್ಯದವರೆಗಿನ ಘಟನಾವಳಿ ಪೊಲೀಸ್ ಇಲಾಖೆಯಿಂದ ಚಿತ್ರೀಕರಿಸಲಾಗಿದೆ. ಈ ವಿಡಿಯೋಗಳನ್ನು ಪರಿಶೀಲಿಸಿದಾಗ ಪೊಲೀಸರು ಹಲ್ಲೆ ನಡೆಸಿರುವ ಯಾವುದೇ ದೃಶ್ಯ ಕಂಡುಬಂದಿಲ್ಲ. ಹಲ್ಲೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಎಂಎಲ್‌ಸಿ ವರದಿಯೂ ಪೊಲೀಸ್ ಠಾಣೆಗೆ ಬಂದಿಲ್ಲ. ಹೀಗಾಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಇಲಾಖೆಯ ವಿಡಿಯೋ ಪರಿಶೀಲನೆಯಲ್ಲಿ ಪೂರಕ ಅಂಶಗಳು ಕಂಡುಬಂದಿಲ್ಲ.ಪ್ರತಿಭಟನೆಗೆ ನಿಗದಿಪಡಿಸಿದ್ದ ಸ್ಥಳದಿಂದ ಪೊಲೀಸ್ ಠಾಣೆಯತ್ತ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದವರು ಹಾಗೂ ಅದಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.