ಬಳ್ಳಾರಿ: ಭವಿಷ್ಯದ ಆರ್ಥಿಕ ಭದ್ರತೆಗಾಗಿ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಉಳಿತಾಯ ಹಾಗೂ ಹೂಡಿಕೆಯ ಅಭ್ಯಾಸ ಬೆಳೆಸಿಕೊಳ್ಳಬೇಕು. ಯಾವುದೇ ಹೂಡಿಕೆ ಮಾಡುವ ಮುನ್ನ ಅದರ ಸಾಧಕ-ಬಾಧಕಗಳ ಕುರಿತು ಸೂಕ್ತ ಅರಿವು ಹೊಂದುವುದು ಅಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಕಿರಣ್ ಸಲಹೆ ನೀಡಿದರು.
ಹಣಕಾಸು ನಿರ್ವಹಣೆ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಗಳಿಕೆಯ ಒಂದು ಭಾಗ ಉಳಿತಾಯ ಮಾಡುವುದರ ಜತೆಗೆ ಸೂಕ್ತ ಹೂಡಿಕೆಗಳ ಮೂಲಕ ದೀರ್ಘಾವಧಿಯಲ್ಲಿ ಸಂಪತ್ತು ನಿರ್ಮಿಸಿಕೊಳ್ಳಲು ಸಾಧ್ಯವಿದೆ. ಹೂಡಿಕೆಯ ಉದ್ದೇಶ, ಲಭ್ಯವಿರುವ ವಿವಿಧ ಹೂಡಿಕೆ ಅವಕಾಶ ಹಾಗೂ ಅವುಗಳಲ್ಲಿನ ಅಪಾಯಗಳ ಕುರಿತು ತಿಳಿದುಕೊಳ್ಳಬೇಕು. ವಿದ್ಯಾರ್ಥಿ ಜೀವನದಿಂದಲೇ ಹಣಕಾಸಿನ ಶಿಸ್ತು ರೂಢಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.
ಐಸಿಎಐ ಬಳ್ಳಾರಿ ಶಾಖೆಯ ಅಧ್ಯಕ್ಷ ಸಿಎ ಪುರುಷೋತ್ತಮ್ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹೆಚ್ಚಿನ ಲಾಭದ ಆಸೆಗೆ ಒಳಗಾಗಿ ಅವಸರದಲ್ಲಿ ಹೂಡಿಕೆ ಮಾಡುವುದರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ಹೀಗಾಗಿ ಯಾವುದೇ ಯೋಜನೆಯಲ್ಲಿ ಹಣ ತೊಡಗಿಸುವ ಮುನ್ನ ಅದರ ವಿಶ್ವಾಸಾರ್ಹತೆ ಹಾಗೂ ಷರತ್ತು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹಣಕಾಸು ತಜ್ಞರು ಅಥವಾ ಸೂಕ್ತ ಮಾರ್ಗದರ್ಶಕರ ಸಲಹೆ ಪಡೆಯಬೇಕು ಎಂದು ಹೇಳಿದರು.ಮುಖ್ಯ ಅತಿಥಿ ರಾಮಕಿರಣ್ ಮಾತನಾಡಿ, ಯುವಜನರು ಇಂದಿನಿಂದಲೇ ಉಳಿತಾಯ ಮತ್ತು ಹೂಡಿಕೆಯ ಮಹತ್ವ ಅರಿತುಕೊಳ್ಳಬೇಕು. ಆರ್ಥಿಕ ಸ್ವಾವಲಂಬನೆ ಸಾಧಿಸಲು ಹಣಕಾಸಿನ ಜ್ಞಾನ ಅತ್ಯಂತ ಅವಶ್ಯಕವಾಗಿದೆ. ವಿದ್ಯಾರ್ಥಿಗಳಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸುವ ನಿಟ್ಟಿನಲ್ಲಿ ಐಸಿಎಐ ಬಳ್ಳಾರಿ ಶಾಖೆ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮ ಶ್ಲಾಘನೀಯ ಎಂದರು.
ಸಿಎ ಶರಣ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.