ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಕ್ಷಣದವರೆಗೆ ಯಾವುದೇ ಒಪ್ಪಂದ ಆಗಿಲ್ಲ. ಯಾವುದೇ ಸಂದರ್ಭದಲ್ಲೂ ಇಂತಹ ಒಂದು ಒಪ್ಪಂದ ನಡೆದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಾನು ಪ್ರಾಥಮಿಕವಾಗಿ ಯೋಗೇಶ್ವರ್‌ಗೆ ಎರಡು ಪಕ್ಷಗಳು ಒಟ್ಟಾಗಿದ್ರೆ ಗೆಲುವು ಸುಲಭ ಅಂತಾ ಹೇಳಿದ್ದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆದರೂ ಗೆಲ್ಲುವ ಅವಕಾಶ ಇದೆ. ಈ ಅವಕಾಶ ಏಕೆ ಕಳೆದುಕೊಳ್ಳುತ್ತಿರಾ ನೀವು ನಿಂತುಕೊಳ್ಳಿ ಅಂತಾ ಸಿಪಿವೈಗೆ ಹೇಳಿದ್ದೆ ಎಂದು ತಿಳಿಸಿದರು.
ಮೈತ್ರಿಗೆ ಮೂಲ ನಾನೇ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯೋಗೇಶ್ವರ್ ಯಾರ ಜತೆ ಹೇಳಿದ್ದಾರೋ ಗೊತ್ತಿಲ್ಲ. ಮೈತ್ರಿಗೆ ಮೂಲ ಯಾರು ಅಂತಾ ಹೇಳಿದ್ದಾರೋ ಅದು ನನಗೆ ಗೊತ್ತಿಲ್ಲ. ಯೋಗೇಶ್ವರ್ ಒಮ್ಮೆ ನನ್ನನ್ನು ಭೇಟಿ ಮಾಡಿದ್ದರು. ನಾನು ಅವರಿಗೆ ಕ್ಷೇತ್ರಕ್ಕೆ ಹೋಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತ ಹೇಳಿದ್ದೆ. ಇದು ಪ್ರಾರಂಭಿಕ ಹಂತವಾಗಿದ್ದು, ಹೊರಗಡೆ ಚರ್ಚೆ ಮಾಡಬೇಡಿ ಎಂದು ಹೇಳಿದ್ದೆ. ನಮ್ಮಲ್ಲೂ ಅಭ್ಯರ್ಥಿ ಹಾಕಬೇಕು, ಬೇಡ ಎಂಬ ಚರ್ಚೆಗಳು ನಡೆಯುತ್ತಿವೆ. ನೀವು ನಿಲ್ಲಬೇಕು ಅಂತಿದ್ದರೆ ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತಾ ತಿಳಿಸಿದ್ದೆ. ಅವರು ಯಾವ ರೀತಿ ನಡೆದುಕೊಂಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಹತ್ತಿರ ಅವರು ಮಾತನಾಡಿಲ್ಲ ಎಂದು ತಿಳಿಸಿದರು.ನಿಖಿಲ್ ಅವರ ಸ್ಪರ್ಧೆ ಬಗ್ಗೆ ಈವರೆಗೂ ನಾನು ತೀರ್ಮಾನ ಮಾಡಿಲ್ಲ. ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಅನ್ನೋದು ಅಷ್ಟೇ ನನ್ನ ಆಲೋಚನೆ. ಆ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿ ಯಾರು ಅನ್ನೋದನ್ನ ಬಿಜೆಪಿ, ಜೆಡಿಎಸ್‌ನ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಪಡೆದ ನಂತರ ತೀರ್ಮಾನಿಸಲಾಗುತ್ತದೆ ಎಂದರು.
ಚನ್ನಪಟ್ಟಣದಲ್ಲಿ ನಾನು ಪ್ರಾಥಮಿಕ ಹಂತದ ಕಾರ್ಯಕರ್ತರ ಸಭೆಗಳನ್ನ ಮಾಡ್ತಿದ್ದೇವೆ. ಬಹುಶಃ ಇನ್ನೊಂದು ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತೆ. ಆ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮತದಾರರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಅಭಿಪ್ರಾಯ ಕ್ರೂಢೀಕರಿಸಿ ದೆಹಲಿಯ ಬಿಜೆಪಿ ನಾಯಕರು ಮತ್ತು ನಾವು ಸೇರಿ ಮಾತನಾಡುತ್ತೇವೆ. ಎನ್‌ಡಿಎ ಅಭ್ಯರ್ಥಿ ಯಾರು ಆಗಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದರು.
ಬಾಕ್ಸ್.............
ಚನ್ನಪಟ್ಟಣ: ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ ರಚನೆ ಭಜನೆ ಒಂದುವರೆ ವರ್ಷದಿಂದ ನಡೆಯುತ್ತಿದೆ. ಇವರು ವಿರೋಧ ಪಕ್ಷದಲ್ಲಿ ಕೆಲಸ ಮಾಡುವಾಗ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ದರು. ಪಿಎಸಿಎಲ್ ಚೇರ್ಮೆನ್ ಅವರ ಪಕ್ಷದವರೇ ಇದ್ರಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ನಿಜಕ್ಕೂ ರಾಜ್ಯದ ತೆರಿಗೆ ಹಣ ಲೂಟಿ ಬಗ್ಗೆ ಮಾಹಿತಿ ಇದ್ದರೆ ಯಾವಾಗಲೋ ತನಿಖೆ ಆಗಬೇಕಿತ್ತು. ಈಗ ನಿಮ್ಮ ಪರಿಸ್ಥಿತಿಗಳಿಂದ ರಕ್ಷಣೆ ಪಡೆಯಲು ಈ ರೀತಿಯ ಬೆಳವಣಿಗೆ ಪ್ರಾರಂಭ ಮಾಡಿದ್ದೀರಿ. ಇದು ಯಾವುದೇ ರೀತಿಯ ಫಲ ನೀಡಲ್ಲ ಎಂದರು.
ನಾನು ನನ್ನ ಮೇಲೆ ತನಿಖೆ ಮಾಡಬೇಡಿ ಅಂತ ಹೇಳಿದ್ದೀನಾ? ತನಿಖೆ ಮಾಡಲು ಎಷ್ಟು ವರ್ಷ ಬೇಕು. ೧೨ ವರ್ಷಗಳಿಂದ ತನಿಖೆ ಮಾಡಬೇಕಾ? ಈಗ ಕಂಪ್ಲೆಂಟ್ ಕೊಡೊದು, ಕರೆದುಕೊಂಡು ಹೋಗಿ ಕೂರಿಸಿಕೊಳ್ಳೊದು ಮಾಡ್ತಿಲ್ವಾ? ತನಿಖೆ ಮಾಡಲಿ ಎಂದರು.
ಚನ್ನಪಟ್ಟಣದ ಕೊಲ್ಲಾಪುರದಮ್ಮನ ದೇವಸ್ಥಾನ ಆವರಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು.