ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬಾ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ತಮ್ಮ ಮುಂದಿನ ನಡೆ ಕುರಿತು ಕುತೂಹಲ ಮೂಡಿಸಿರುವ ಹಲವು ವಿಚಾರಗಳಿಗೆ ಪ್ರತಿಕ್ರಿಯಿಸಿ, ಹಿಂದೆ ಬಿಜೆಪಿಯಿಂದ ಉಪಮುಖ್ಯಮಂತ್ರಿ ಸ್ಥಾನದ ಆಫರ್ ಬಂದಿತ್ತು. ಕಾಂಗ್ರೆಸ್‌ನಿಂದಲೂ ಸಚಿವ ಸ್ಥಾನ ನೀಡುವ ಅವಕಾಶವಿತ್ತು. ಆದರೂ ನಾನು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲಿಲ್ಲ. ಇದೀಗ ಜೆಡಿಎಸ್‌ನಿಂದ ಗೆದ್ದು ಬಂದಿದ್ದು, ಪಕ್ಷದಲ್ಲಿಯೇ ಇದ್ದೇನೆ. ಆದರೆ ಪಕ್ಷದ ಕಡೆಯಿಂದ ಯಾವುದೇ ಆಹ್ವಾನ, ಕರೆ ಅಥವಾ ಮಾತುಕತೆಗಳು ನಡೆಯುತ್ತಿಲ್ಲ. ಹೀಗಾಗಿ ಸದ್ಯ ಸಂಪೂರ್ಣವಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನರ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದರು. ಯಾರು ಮುಖ್ಯಮಂತ್ರಿಯಾಗಿದ್ದರೂ ಅವರ ಗಮನ ಸೆಳೆದು ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಹಾಗೂ ಸೌಲಭ್ಯಗಳನ್ನು ತರುವುದೇ ನನ್ನ ಉದ್ದೇಶ. ರಾಜಕೀಯಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರವಾಗಿ ಈ ಹಿಂದೆ ನಾನು ಪ್ರಶ್ನೆ ಮಾಡಿದ್ದೆ. ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೆ ರಾಜೀನಾಮೆ ನೀಡುವ ಅಗತ್ಯವೇನು ಎಂದು ಕೇಳಿದ್ದೆ. ಆದರೆ ಆಗ ನನ್ನನ್ನು ಬೆಂಬಲಿಸುವವರು ಯಾರೂ ಇರಲಿಲ್ಲ. ಇದೀಗ ನಮ್ಮ ನಾಯಕರೇ ಸಿದ್ದರಾಮಯ್ಯ ಅವರ ಮನೆಗೆ ಹೋಗುತ್ತೇವೆ, ಅವರು ದೊಡ್ಡ ನಾಯಕರು, ಉಳಿಯಬೇಕು ಎಂದು ಹೇಳುತ್ತಿದ್ದಾರೆ. ಇದರಿಂದ ನನಗೆ ಈಗ ಸಮಾಧಾನವಾಗಿದೆ. ನಾನು ಹಿಂದೆ ಹೇಳಿದ್ದೇ ತಪ್ಪು ಎಂದು ಭಾವಿಸಿದ್ದೆ. ಆದರೆ ಈಗಿನ ಬೆಳವಣಿಗೆಗಳಿಂದ ನನ್ನ ನಿಲುವಿನ ಬಗ್ಗೆ ಸಮಾಧಾನ ಮೂಡಿದೆ ಎಂದು ಹೇಳಿದರು.ತಮ್ಮ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಯಾವತ್ತೂ ಮುಂಚಿತವಾಗಿ ನಿರ್ಧಾರ ಕೈಗೊಳ್ಳುವ ವ್ಯಕ್ತಿಯಲ್ಲ. ಚಾಮುಂಡೇಶ್ವರಿ ಹಾಗೂ ಹಾಸನಾಂಬೆ ನನ್ನ ಮನೆದೇವರು. ಆ ತಾಯಂದಿರ ಆಶೀರ್ವಾದ ಪಡೆದು ಅವರು ಯಾವ ದಾರಿ ತೋರಿಸುತ್ತಾರೋ ಆ ದಾರಿಯಲ್ಲಿ ಸಾಗುತ್ತೇನೆ. ನನ್ನ ಮುಂದಿನ ನಡೆ ಏನು ಎಂಬುದು ನನಗೂ ಗೊತ್ತಿಲ್ಲ. ಅದನ್ನು ಆ ತಾಯಿಯೇ ನಿರ್ಧರಿಸಬೇಕು ಎಂದರು. ಕುಟುಂಬದ ವಿಚಾರದಲ್ಲಿ ಏನೇ ಇದ್ದರೂ ರಾಜಕೀಯವಾಗಿ ನಾವೆಲ್ಲರೂ ಒಟ್ಟಾಗಿದ್ದೇವೆ. ಮುಂದಿನ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಸಮಯವಿದೆ. ಆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸ್ಟಿಂಗ್ ಕಾರ್ಯಾಚರಣೆ ಕುರಿತು ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವನಲ್ಲ ಎಂದು ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದರು. ಸರ್ವಜ್ಞರ ವಚನವನ್ನು ಉಲ್ಲೇಖಿಸಿದ ಅವರು, ಕಲ್ಲಲ್ಲಿ ಹೊಡೆದವರಿಗೆ ಬೆಣ್ಣೆಯಲ್ಲಿ ಹೊಡೆಯಬೇಕು ಎಂದು ಸರ್ವಜ್ಞರು ಹೇಳಿದ್ದಾರೆ. ಆದರೆ ಈಗ ಎರಡೂ ಕಡೆಯಿಂದ ಕಲ್ಲೇಟು ಹೊಡೆಯಲಾಗುತ್ತಿದೆ. ಇದರಿಂದ ಮುಂದೆ ಎಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆಯೋ ಗೊತ್ತಿಲ್ಲ. ರಾಜಕೀಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗಿಂತ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆಯಾಗಬೇಕು. ಅಂತಹ ಸದ್ಬುದ್ಧಿಯನ್ನು ಹಾಸನಾಂಬೆ ತಾಯಿ ಎಲ್ಲ ರಾಜಕಾರಣಿಗಳಿಗೂ ಕರುಣಿಸಲಿ ಎಂದು ಆಶಿಸಿದರು.ಜಿ.ಟಿ.ದೇವೇಗೌಡರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಜೆಡಿಎಸ್‌ನಲ್ಲಿನ ಅವರ ಮುಂದಿನ ನಡೆ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿರುವ ಸುಳಿವು ನೀಡಿದರೂ, ಪಕ್ಷ ತೊರೆಯುವ ನಿರ್ಧಾರವನ್ನು ಸದ್ಯಕ್ಕೆ ಪ್ರಕಟಿಸದೆ ರಾಜಕೀಯ ಬೆಳವಣಿಗೆಗಳಿಗೆ ಕಾಲಾವಕಾಶ ನೀಡಿದ್ದಾರೆ.