ಖಾಸಗಿ, ಸರ್ಕಾರಿ ಶಾಲೆಗಳೆಂಬ ತಾರತಮ್ಯ ಬೇಡ: ಸುಧಿ ಸುರೇಶ್

KannadaprabhaNewsNetwork |  
Published : Sep 14, 2026, 01:30 AM IST
ಪೋಟೋ 1 : ತ್ಯಾಮಗೊಂಡ್ಲು ಪಟ್ಟಣದ ಜ್ಞಾನಧಾಮ ಶಾಲೆಯಲ್ಲಿ ನೆಲಮಂಗಲ ತಾಲೂಕು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಿ ಸುರೇಶ್ ಹಾಗೂ  ಗಣ್ಯರು ಉದ್ಘಾಟಿಸಿದರು | Kannada Prabha

ಸಾರಾಂಶ

ಇದೇ ಸಂದರ್ಭದಲ್ಲಿ ತಾಲೂಕಿನ 35ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಜ್ಞಾನಗುರು, ಪ್ರಾಂಶುಪಾಲರಿಗೆ ಜ್ಞಾನತಪಸ್ವಿ, ಆಡಳಿತ ಮಂಡಳಿಯವರಿಗೆ ಜ್ಞಾನಸಾರಥಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಫಲಿತಾಂಶ, ಪಠ್ಯದ ವಿಚಾರದಲ್ಲಿ ಖಾಸಗಿ ಶಾಲೆಗಳು ಪೈಪೋಟಿ ನೀಡುತ್ತಲೇ ಬರುತ್ತಿವೆ. ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವ ವಿಚಾರದಲ್ಲಿ ಖಾಸಗಿ-ಸರ್ಕಾರಿ ಶಾಲೆಗಳೆಂಬ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ, ಮುಂದಿನ ವರ್ಷದಿಂದ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಖಾಸಗಿ ಶಾಲಾ ಶಿಕ್ಷಕರನ್ನು ಪರಿಗಣಿಸಬೇಕು ಎಂದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಿ ಸುರೇಶ್ ಸರ್ಕಾರವನ್ನು ಒತ್ತಾಯಿಸಿದರು.

ತ್ಯಾಮಗೊಂಡ್ಲು ಪಟ್ಟಣದ ಜ್ಞಾನಧಾಮ ಶಾಲೆಯಲ್ಲಿ ನೆಲಮಂಗಲ ತಾಲೂಕು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರಕ್ಕೆ ಖಾಸಗಿ ಶಾಲೆಗಳಿಂದ ಅನುಕೂಲಬೇಕು. ಆದರೆ ಶಿಕ್ಷಕರ ದಿನಾಚರಣೆ ವೇಳೆ ಖಾಸಗಿ ಶಿಕ್ಷಕರನ್ನು ನೆನಪಿಸಿಕೊಳ್ಳುವುದಿಲ್ಲ, ಕಡಿಮೆ ಸಂಬಳ ಪಡೆದರೂ ಸರ್ಕಾರಿ ಶಾಲೆಗಳ ಶಿಕ್ಷಕರಿಗಿಂತ ಹೆಚ್ಚಿನ ಫಲಿತಾಂಶ ನೀಡುವಲ್ಲಿ ಮುಂದೆ ಇದ್ದಾರೆ. ಸರ್ಕಾರ ಸರ್ಕಾರಿ- ಖಾಸಗಿ ಶಾಲೆ ಎಂಬ ಮಲತಾಯಿ ಧೋರಣೆ ಬಿಟ್ಟು ಇಬ್ಬರನ್ನೂ ಸಮಾನವಾಗಿ ಕಾಣಬೇಕಿದೆ. ಸರ್ಕಾರಿ ಶಾಲೆಗಳಿಂತ ಖಾಸಗಿ ಶಾಲೆಗಳಲ್ಲೇ ಹೆಚ್ಚು ಫಲಿತಾಂಶ ಉತ್ತಮವಾಗಿರುವುದನ್ನು ಮನಗಾಣಬೇಕು ಎಂದರು.

ವಿಆರ್‌ ಮಾಧ್ಯಮ ಸಂಸ್ಥೆಯ ಸಂಪಾದಕ ಚನ್ನೇಗೌಡ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಾಗುತ್ತಿದೆ. ಕೃತಕ ಬುದ್ದಿಮತ್ತೆ, ಡಿಜಿಟಲ್ ಪ್ರಗತಿ ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಉದ್ಯೋಗ ಹಾಗೂ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಬಗ್ಗೆ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಇದು ಖಾಸಗಿ ಶಾಲೆಗಳಿಗೆ ಸವಾಲಾಗಿದೆ. ಖಾಸಗಿ ಶಾಲಾ ಶಿಕ್ಷಕರು ಆಡಳಿತ ಮಂಡಳಿಗೆ ಬೆನ್ನುಲಾಗಿ ನಿಲ್ಲುವ ಅಗತ್ಯ ಹೆಚ್ಚಿದೆ ಎಂದು ತಿಳಿಸಿದರು.

ಜ್ಞಾನಧಾಮ ಶಿಕ್ಷಣ ಸಂಸ್ಥೆ ಶಿವಕುಮಾರ್, ಖಾಸಗಿ ಶಾಲಾ ಶಿಕ್ಷಕರು ಸರ್ಕಾರಿ ಶಾಲಾ ಶಿಕ್ಷಕರಿಗಿಂತ ಕಡಿಮೆಯಿಲ್ಲದೆ ಮಕ್ಕಳನ್ನು ಉತ್ತಮ ಫಲಿತಾಂಶದ ಜೊತೆಗೆ ಸಂಸ್ಕಾರ, ಸಂಸ್ಕೃತಿ ತಿಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ:

ಇದೇ ಸಂದರ್ಭದಲ್ಲಿ ತಾಲೂಕಿನ 35ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಜ್ಞಾನಗುರು, ಪ್ರಾಂಶುಪಾಲರಿಗೆ ಜ್ಞಾನತಪಸ್ವಿ, ಆಡಳಿತ ಮಂಡಳಿಯವರಿಗೆ ಜ್ಞಾನಸಾರಥಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ನರಸೇಗೌಡ, ಜ್ಞಾನಧಾಮ ಶಾಲೆಯ ಶಿವಕುಮಾರ್, ಕಾರ್ಯದರ್ಶಿ ರೇಖಾ, ವಿದ್ಯಾಸ್ಫೂರ್ತಿ ಅಡಳಿತ ಮಂಡಳಿ ಸಂಸ್ಥಾಪಕ ಉಮಾಶಂಕರ್, ಹರ್ಷ ಶಿಕ್ಷಣ ಸಂಸ್ಥೆಯ ಶಿವಕುಮಾರ್, ಹಿತಚಿಂತನ ಟ್ರಸ್ಟ್ ನ ಸಂಸ್ಥಾಪಕ ರಾಮಸ್ವಾಮಿ, ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿ ಗೋವಿಂದರಾಜು, ವಿಕೇರ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ರಾಜಶೇಖರ್, ಕನ್ನಡ ಕೂಟ ಎಜುಕೇಷನ್ ಸೊಸೈಟಿ ಅಧ್ಯಕ್ಷ ನರಸಿಂಹಮೂರ್ತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ: ಬಸವಂತಪ್ಪ
ಉಪ್ಪಾರ ವೆಂಕಟೇಶನಿಗೆ ಪೊಲೀಸರಿಂದ ಹುಡುಕಾಟ