ಹಗರಿಬೊಮ್ಮನಹಳ್ಳಿ; ರೈತರಿಗೆ ರಸಗೊಬ್ಬರ ಮತ್ತು ಬೀಜ ವಿತರಣೆಯಲ್ಲಿ ಪರಿಶಿಷ್ಟರಿಗೆ ಹೆಚ್ಚಿನ ರಿಯಾಯಿತಿ ಮತ್ತು ಸಾಮಾನ್ಯ ವರ್ಗಕ್ಕೆ ಕಡಿಮೆ ರಿಯಾಯಿತಿ ಒದಗಿಸುತ್ತಿರುವ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ನೇಮರಾಜ ನಾಯ್ಕ ಖೇದ ವ್ಯಕ್ತಪಡಿಸಿದರು.
ರೈತರಲ್ಲಿ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿರುವ ತಾರತಮ್ಯದಂತೆಯೇ ಸರ್ಕಾರ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಶೈಕ್ಷಣಿಕ ಪ್ರವಾಸ ಏರ್ಪಡಿಸುತ್ತಿರುವುದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಉಂಟಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಜಾತೀಯತೆಯ ವಿಷ ಬೀಜ ಬಿತ್ತುವುದು ಸರಕಾರಕ್ಕೆ ಶೋಭೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಈಗಾಗಲೇ ಶುರುವಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ ಹಂಪಸಾಗರ, ತಂಬ್ರಹಳ್ಳಿ, ಕೋಗಳಿ ಹೋಬಳಿ ಕೇಂದ್ರಗಳ ಜೊತೆಗೆ ಎಪಿಎಂಸಿಯಲ್ಲಿ ಒಂದು ಹೆಚ್ಚುವರಿ ರಿಯಾಯಿತಿ ದರದ ಬಿತ್ತನೆ ಬೀಜ ಮಾರಾಟ ಕೇಂದ್ರ ತೆರೆಯಲಾಗಿದೆ. ತಾಲೂಕಿನಲ್ಲಿ ೫೦೬೪೨ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಅಗತ್ಯ ಇರುವ ೨೭೦ ಕ್ವಿಂಟಲ್ ಬೀಜಗಳ ಮಾರಾಟಕ್ಕೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಧಿಕೃತ ಬೀಜ ಮಾರಾಟಗಾರರಿಂದಲೇ ರೈತರು ಬಿತ್ತನೆ ಬೀಜಗಳನ್ನು ಖರೀದಿಸಬೇಕು. ನಕಲಿ ಬೀಜಗಳ ಕುರಿತು ರೈತರು ಎಚ್ಚರ ವಹಿಸಬೇಕು. ಕಳಪೆ ಬೀಜ ಮಾರಾಟಗಾರರ ಮಾಹಿತಿ ನೀಡಿದರೆ ಅಂಥಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ರೈತರಿಗೆ ನ್ಯಾಯ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಎಫ್.ಐ.ಡಿ ಮೂಲಕ ಯೂರಿಯಾ ರಸಗೊಬ್ಬರ ಮಾರಾಟ ಕುರಿತು ರಥರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಶಾಸಕರು ಚಾಲನೆ ನೀಡಿದರು.
ಹಗರಿಬೊಮ್ಮನಹಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ಕೃಷಿ ಇಲಾಖೆ ಆಯೋಜಿಸಿದ್ದ ರಿಯಾಯಿತಿ ದರದ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ನೇಮರಾಜ ನಾಯ್ಕ ಚಾಲನೆ ನೀಡಿದರು.