ಹೊಂಡ ಮುಚ್ಚುವ ಡಾಂಬರು ತೇಪೆಕಾರ್ಯ ವೀಕ್ಷಿಸಿದ ಶಾಸಕ ಅಸಮಾಧಾನ
ಅತಿವೃಷ್ಟಿಯಿಂದ ಎಲ್ಲೆಡೆ ಹಾಳಾಗಿರುವ ರಸ್ತೆಗಳ ದುರಸ್ತಿಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡದಿರುವುದಕ್ಕೆ ಶಾಸಕ ದಿನಕರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ದುರಸ್ತಿಗೆ ಸರ್ಕಾರದ ಅನುದಾನದ ಕೊರತೆಯಿಂದಾಗಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನೇ ಅನಿವಾರ್ಯವಾಗಿ ಬಳಸಿಕೊಂಡು ಪಟ್ಟಣದ ರಸ್ತೆಗಳ ಹೊಂಡಗುಂಡಿ ದುರಸ್ತಿ ಕಾರ್ಯವನ್ನು ಶಾಸಕ ದಿನಕರ ಶೆಟ್ಟಿ ಕೈಗೆತ್ತಿಕೊಂಡಿದ್ದಾರೆ. ಶನಿವಾರ ನೆಲ್ಲಿಕೇರಿ ಹಳೆಯ ಬಸ್ ನಿಲ್ದಾಣದ ಎದುರು ಮುಖ್ಯ ರಸ್ತೆಯ ಹೊಂಡ ಮುಚ್ಚುವ ಡಾಂಬರು ತೇಪೆಕಾರ್ಯ ವೀಕ್ಷಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಅತ್ಯಗತ್ಯವಿರುವ ಸುಸಜ್ಜಿತ ರಸ್ತೆ, ಕುಡಿಯುವ ನೀರು, ಬೀದಿದೀಪ ಇಂತಹ ಮೂಲಭೂತ ಸೌಕರ್ಯಗಳ ಪೂರೈಕೆಗೆ ಸರ್ಕಾರ ಆದ್ಯತೆ ನೀಡಬೇಕು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳು ಪೂರೈಸುತ್ತಾ ಬಂದರೂ ಇದುವರೆಗೆ ನಮ್ಮ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಾನು ಸಲ್ಲಿಸಿದ ಯಾವುದೇ ಬೇಡಿಕೆಗೆ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಭಟ್ಕಳಕ್ಕಷ್ಟೇ ಸೀಮಿತಗೊಳಿಸಿಕೊಂಡಿರುವಂತಿದೆ. ಕುಮಟಾ-ಹೊನ್ನಾವರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಅವರು ಮುತುವರ್ಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಪುರಸಭೆ ಸದಸ್ಯರಾದ ತುಳಸು ಗೌಡ, ಮೋಹಿನಿ ಗೌಡ, ಹೇಮಂತಕುಮಾರ ಗಾಂವಕರ, ಪ್ರಸಾದ ನಾಯಕ, ಚೇತೇಶ ಶಾನಭಾಗ, ರಾಮ ಮಡಿವಾಳ, ನವೀನ ಪಟಗಾರ, ನಾಗರಾಜ ಹರಿಕಂತ್ರ ಇತರರಿದ್ದರು.