ಕಾರವಾರ: ವಸತಿ ಯೋಜನೆಯಲ್ಲಿ ಹಣ ಕೇಳಿರುವ ಆರೋಪವನ್ನು ತಳ್ಳಿ ಹಾಕಿದ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ನಮ್ಮ ಸರ್ಕಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ತಿಳಿಸಿದರು.
ಸೀಬರ್ಡ್ ಯೋಜನೆಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರ ವಿತರಿಸಲು ಕೇಂದ್ರ ಸರ್ಕಾರವು 25 ವರ್ಷಗಳ ಕಾಲ ವಿಳಂಬ ಮಾಡಿರುವುದು ಬೇಸರ ತಂದಿದೆ. ಭೂಮಿ ನೀಡಿದ ಅನೇಕರು ಈಗ ಬದುಕಿಲ್ಲ, ಅವರ ಮೊಮ್ಮಕ್ಕಳು ಪರಿಹಾರ ಪಡೆಯುವಂತಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇಲ್ಲಿವರೆಗೆ 57 ಕುಟುಂಬಗಳಿಗೆ ₹10.47 ಕೋಟಿ ಹೆಚ್ಚುವರಿ ಭೂ ಪರಿಹಾರ ನೀಡಲಾಗಿದೆ. ಇನ್ನು 138 ಕುಟುಂಬಗಳಿಗೆ ₹58 ಕೋಟಿ ಪರಿಹಾರ ಕೇಂದ್ರ ಸರ್ಕಾರದಿಂದ ಬರಬೇಕಿದೆ. ಈ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಂಸದ ಕಾಗೇರಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.ಶಾಸಕ ಸೈಲ್ ಕಂಚಿನ ಬೈಲ್ ರೈತರ ಸಮಸ್ಯೆ ಮತ್ತು ಬಿರಡೆ ಗ್ರಾಮಕ್ಕೆ ರಸ್ತೆ ನಿರ್ಮಾಣದ ಬಗ್ಗೆ ಸಂಸದ ಕಾಗೇರಿ ಅವರ ಗಮನ ಸೆಳೆದಿದ್ದಾರೆ ಎಂದು ವೈದ್ಯರು ಹೇಳಿದರು. ಅಲ್ಲದೆ, ಸೀಬರ್ಡ್ ನಿರಾಶ್ರಿತರಲ್ಲಿ ಅಕ್ಷರ ಜ್ಞಾನ ಇಲ್ಲದ ಕಾರಣ 95 ಪ್ರಕರಣಗಳು ಪರಿಹಾರಕ್ಕೆ ಅರ್ಜಿ ಸಲ್ಲಿಸದೆ ತಪ್ಪಿಹೋಗಿವೆ. ಕೊಂಕಣ ರೈಲ್ವೆ ಯೋಜನೆಯಲ್ಲೂ ಪರಿಹಾರ ಪಡೆಯದ ಪ್ರಕರಣಗಳಿದ್ದು, ಈ ಬಗ್ಗೆಯೂ ಸಂಸದರ ಗಮನಕ್ಕೆ ತರಲಾಗಿದೆ ಎಂದು ಅವರು ವಿವರಿಸಿದರು.
ನಾವು ಗೋವು ರಕ್ಷಣೆಗೆ ಬದ್ಧರಾಗಿದ್ದೇವೆ. ಗೋವುಗಳಿಗೆ ಹಿಂಸೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಗೋವನ್ನು ತಾಯಿಯಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.