ಕೆಪಿಎಸ್‌ನಲ್ಲಿ ಪ್ರಾಥಮಿಕ ಶಾಲೆಗಳ ವಿಲೀನ ಬೇಡ

KannadaprabhaNewsNetwork |  
Published : Jul 08, 2026, 01:15 AM IST
7ಕೆಆರ್ ಎಂಎನ್ 5.ಜೆಪಿಜಿರಾಮನಗರ ತಾಲೂಕು ಬಿಡದಿ ಹೋಬಳಿಯ ತೊರೆದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಬಯಲು ರಂಗ ಮಂದಿರವನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಪ್ರೌಢಶಾಲೆಗಳಿಗಷ್ಟೇ ಸೀಮಿತಗೊಳಿಸಬೇಕು. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಅದರೊಂದಿಗೆ ವಿಲೀನಗೊಳಿಸಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಮರು ಚಿಂತನೆ ನಡೆಸಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು

ರಾಮನಗರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಪ್ರೌಢಶಾಲೆಗಳಿಗಷ್ಟೇ ಸೀಮಿತಗೊಳಿಸಬೇಕು. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಅದರೊಂದಿಗೆ ವಿಲೀನಗೊಳಿಸಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಮರು ಚಿಂತನೆ ನಡೆಸಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.

ತಾಲೂಕಿನ ಬಿಡದಿ ಹೋಬಳಿ ತೊರೆದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಬಯಲು ರಂಗ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಕೆಪಿಎಸ್ ಶಾಲೆಗಳೊಂದಿಗೆ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಿದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ಕಾರ ಮರು ಚಿಂತನೆ ಮಾಡುವುದು ಸೂಕ್ತ ಎಂದರು.

ಹಳ್ಳಿಗಳಲ್ಲಿರುವ ಕಿರಿಯ ಮತ್ತು ಹಿರಿಯ ಪ್ರಾಥಮಿಕಗಳು ಶೈಕ್ಷಣಿಕ ವ್ಯವಸ್ಥೆಯ ಜೀವನಾಡಿಗಳು. ಶಿಕ್ಷಕರ ಕೊರತೆಯ ನೆಪವೊಡ್ಡಿ ಅವುಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳೊಂದಿಗೆ ವಿಲೀನಗೊಳಿಸುವುದರಲ್ಲಿ ಅರ್ಥವಿಲ್ಲ. 5 ಮಕ್ಕಳೇ ಇರಲಿ ಕಿರಿಯ - ಹಿರಿಯ ಪ್ರಾಥಮಿಕ ಶಾಲೆಗಳ ಬಾಗಿಲು ಮುಚ್ಚಬಾರದು ಎಂದು ಒತ್ತಾಯಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಕರೆತಂದು ಕರೆದೊಯ್ಯಬಹುದು. ಆದರೆ, ಪ್ರಾಥಮಿಕ ಶಾಲಾ ಮಕ್ಕಳನ್ನು ಕರೆತರುವುದು ಕಷ್ಟ. ಅಲ್ಲದೆ, ಆ ಮಕ್ಕಳ ರಕ್ಷಣೆ, ಆರೈಕೆ, ಸಾರಿಗೆ ವ್ಯವಸ್ಥೆ ಬಗ್ಗೆಯೂ ಎಚ್ಚರ ವಹಿಸಬೇಕಾಗುತ್ತದೆ. ಹೀಗಾಗಿಯೇ ಕೆಪಿಎಸ್ ಶಾಲೆಗಳು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸುವುದು ಸೂಕ್ತವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.

ಶಿಕ್ಷಕರ ಜೊತೆಗೆ ಆಯಾಗಳು ಮತ್ತು ಅಟೆಂಡರ್ ಗಳ ನೇಮಕಾತಿಯನ್ನೂ ಮಾಡಬೇಕು. ಶಾಲಾ ಕೊಠಡಿಗಳು ಮಾತ್ರವಲ್ಲದೆ ಶೌಚಾಲಯಗಳು, ವಿದ್ಯಾರ್ಥಿನಿಲಯಗಳ ನಿರ್ಮಾಣದ ಬಗ್ಗೆಯೂ ಗಮನ ಹರಿಸಬೇಕು. ಶಾಲೆಗಳಲ್ಲಿ ಇಂಟರ್ ನೆಟ್ ವ್ಯವಸ್ಥೆ ಅಳವಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಹಣ ಇದ್ದವರೆಲ್ಲರು ಸಹಾಯ ಮಾಡುವುದಿಲ್ಲ. ಶೇಕಡ 95ರಷ್ಟು ಆದರ್ಶ ಶ್ರೀಮಂತರು ಆದರ್ಶ ಜಿಪುಣರಾಗಿರುತ್ತಾರೆ. ಶೇಕಡ 5 ರಷ್ಟು ಶ್ರೀಮಂತರು ಮಾತ್ರ ಹೃದಯವಂತರಾಗಿರುತ್ತಾರೆ. ಆ ಹೃದಯವಂತರನ್ನು ಒಗ್ಗೂಡಿಸಿ ಸರ್ಕಾರಿ ಶಾಲೆಗೆ ಸವಲತ್ತುಗಳನ್ನು ಕಲ್ಪಿಸಿರುವ ಮುಖಂಡ ಸೋಮಣ್ಣರವರ ಸಾಮಾಜಿಕ ಮತ್ತು ಶೈಕ್ಷಣಿಕ ಕಳಕಳಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳೇ ಭವ್ಯ ಭಾರತದ ರಾಯಭಾರಿಗಳು :

ದೇವರ ಹುಂಡಿಗೆ ಹಣ ಹಾಕಿದರೆ ಭಕ್ತರಾಗುತ್ತಾರೆ. ಸಮಾಜಮುಖಿ ಕೆಲಸಗಳಿಗೆ ದಾನ ಮಾಡಿದರೆ ದಾನಿಗಳಾಗುತ್ತಾರೆ. ದೇಶದಲ್ಲಿ ಭಕ್ತರಿಗಿಂತ ದಾನಿಗಳ ಸಂಖ್ಯೆ ಹೆಚ್ಚಾಗಬೇಕು. ದಾನಿಗಳು ಮಾಡುವ ಸಾಮಾಜಿಕ ಕಾರ್ಯಗಳು ಬೇರೆಯವರಿಗೂ ಪ್ರೇರಣೆಯಾಗುತ್ತವೆ. ಸಾಮಾನ್ಯ ಶಾಲೆಗಳಲ್ಲಿ ಓದಿದವರು ಅಸಾಮಾನ್ಯ ಸಾಧನೆ ಮಾಡಿದ್ದಾರೆ ಎಂಬುದಕ್ಕೆ ಈ ದಾನಿಗಳೇ ನಿದರ್ಶನ ಎಂದು ಹೇಳಿದರು.

ಈಗ ಬಡವನೂ ತನ್ನ ಮಗನನ್ನು ಖಾಸಗಿ ಶಾಲೆಗೆ ಸೇರಿಸಲು ಉತ್ಸಾಹ ತೋರುತ್ತಿದ್ದಾನೆ. ಆದರೆ, ಯಾವ ಶಾಲೆಯಲ್ಲಿ ಓದುತ್ತೇವೆ ಎಂಬುದಕ್ಕಿಂತ ಪಡೆದ ಶಿಕ್ಷಣ ಮುಖ್ಯವಾಗುತ್ತದೆ. ಶಿಕ್ಷಣ ಕದಿಯಲಾಗದ ಬಂಗಾರ. ಶಿಕ್ಷಣ ನಮ್ಮ ಬದುಕು, ಭವಿಷ್ಯ, ಬದುಕಿನ ರಕ್ಷಾ ಕವಚ. ಮಕ್ಕಳೇ ಭವ್ಯ ಭಾರತದ ರಾಯಭಾರಿಗಳು ಎಂದರು.

ಪದವಿ ಗಳಿಸುವುದರಿಂದ ಉದ್ಯೋಗ ಸಿಗಲ್ಲ. ಅದರೊಟ್ಟಿಗೆ ಕೌಶಲ್ಯತೆಯನ್ನು ಕಲಿಯಬೇಕು. ಈಗ ಕಲಿತವರಿಂದಲೇ ಸಮಾಜ ಕಲುಷಿತಗೊಳ್ಳುತ್ತಿದೆ. ಯಾವಾಗಲು ಶಿಕ್ಷಣ ಸಕರಾತ್ಮಕ, ರಚನಾತ್ಮಕ ಕಾರ್ಯಗಳಿಗೆ ಬಳಸಬೇಕು. ಪರಿಪೂರ್ಣ ವಿದ್ಯೆ ಅಂಕ ಗಳಿಸುವುದರಿಂದ ಅಲ್ಲ. ಶಿಕ್ಷಣದ ಜೊತೆಗ ಸಂಸ್ಕಾರ, ವಿವೇಚನೆ ಕಲಿತಾಗ ಪರಿಪೂರ್ಣ ಆಗುತ್ತದೆ ಎಂದು ತಿಳಿಸಿದರು.

ಯಾವ ಮನುಷ್ಯವು ಪದವಿಯಿಂದ ದೊಡ್ಡವನಾಗಲ್ಲ. ಅಧಿಕಾರ ಮತ್ತು ಹಣ ಬಂದಾಗ ಬದಲಾಗದವನು ಒಳ್ಳೆಯ ಮನುಷ್ಯ. ಮೌನವಾಗಿ ಸಾಧನೆ ಮಾಡಿ ಮೇಲೆ ಬರಬೇಕೇ ಹೊರತು ಗದ್ದಲ ಮಾಡಿ ಪ್ರಸಿದ್ಧರಾಗಬಾರದು. ಮಕ್ಕಳ ಕಣ್ಣುಗಳು ಚಿಕ್ಕದಾಗಿರಬಹುದು. ಆದರೆ, ನಿಮ್ಮ ಕನಸುಗಳು ದೊಡ್ಡದಾಗಿರಬೇಕು. ನಿಮಗಾಗಿ ದೊಡ್ಡ ಭವಿಷ್ಯದ ಬಾಗಿಲು ಕಾಯುತ್ತಿದೆ ಎಂದು ಮಂಜುನಾಥ್ ಹೇಳಿದರು.

ಬಿಜೆಪಿ ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಪೋಷಕರು ಖಾಸಗಿ ಶಾಲೆಗತ್ತ ಮುಖ ಮಾಡುತ್ತಿರುವ ಕಾರಣ ಸರ್ಕಾರಿ ಶಾಲೆ ಅಳಿವಿನ ಅಂಚಿಗೆ ತಲುಪುತ್ತಿವೆ. ಆದರೀಗ ದಾನಿಗಳು ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಕೖಜೋಡಿಸಬೇಕು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರೆ, ಶಾಲೆಗೆ ಅಗತ್ಯ ಪರಿಕರ ಸವಲತ್ತುಗಳನ್ನು ಒದಗಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಧ್ವಜ ಸ್ತಂಭ, ಬೈಸಿಕಲ್ ನಿಲ್ದಾಣ, ರಾಷ್ಟ್ರಕವಿ ಕುವೆಂಪು ಬಯಲು ರಂಗ ಮಂದಿರ, ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಮಾಜಿ ಸದಸ್ಯೆ ವೖಶಾಲಿ ಚೆನ್ನಪ್ಪ, ಎಸ್ ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕಿ ಜಯಶ್ರೀ, ಬ್ರಿಟಾನಿಯಾ ಕಂಪನಿ ಕೃಷ್ಣಪ್ಪ,

ಆಹ್ವಾನ್ ಫೌಂಡೇಷನ್ ಕಿಶೋರ್, ದಾನಿಗಳಾದ ಮೋಹನ್, ನಂದನ್ ಕುಮಾರ್, ಜಯಪ್ರಕಾಶ್, ಕೃಷ್ಣರಾವ್, ಗುರು, ವೆಂಕಟರಾಮು, ಸುಧೀರ್ ಮಿಶ್ರಾ, ಮುಖಂಡರಾದ ಸೋಮಣ್ಣ (ಚನ್ನಪ್ಪ), ಇಟ್ಟುಮಡು ಗೋಪಾಲ್, ವಿಶಾಲ್ ಜೖನ್ ಮತ್ತಿತರರು ಉಪಸ್ಥಿತರಿದ್ದರು.

7ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ತಾಲೂಕು ಬಿಡದಿ ಹೋಬಳಿಯ ತೊರೆದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಬಯಲು ರಂಗ ಮಂದಿರವನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿ: ಚಾಲಕ ಸೇರಿ ಇಬ್ಬರ ಸಾವು
ಹರಳಯ್ಯ ಸ್ವಾಮೀಜಿ ಮೇಲಿನ ಹಲ್ಲೆಗೆ ಆಕ್ರೋಶ