ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಮಳೆ ಕೊರತೆ, ಮೇವು ಮತ್ತು ನೀರಿನ ಅಭಾವದಿಂದ ಜಾನುವಾರು ಸಾಕುವುದು ರೈತರಿಗೆ ಹೊರೆಯಾಗುತ್ತಿದೆ. ಇದೇ ಕಾರಣಕ್ಕೆ ಅನೇಕರು ತಮ್ಮ ಎತ್ತುಗಳನ್ನು ಮಾರಾಟ ಮಾಡಲು ಸಂತೆಗೆ ಬರುತ್ತಿದ್ದಾರೆ. ಆದರೆ ಬೇಡಿಕೆ ಇಲ್ಲದ ಕಾರಣ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಪರಿಣಾಮ, ಎತ್ತುಗಳನ್ನು ಸಾಕಲು ಆಗದೆ, ಮಾರಾಟ ಮಾಡಲೂ ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಕುವುದು ಕಷ್ಟ: ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾದ ನಂತರ ಎತ್ತುಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಟ್ರ್ಯಾಕ್ಟರ್ ಹಾಗೂ ಇತರ ಯಂತ್ರೋಪಕರಣ ಬಳಕೆ ಹೆಚ್ಚಿರುವುದರಿಂದ ಹೊಲದ ಕೆಲಸಕ್ಕೂ ಎತ್ತುಗಳಿಗೆ ಬೇಡಿಕೆ ಇಲ್ಲ, ಈಗ ಹೊಲದಲ್ಲಿ ಎತ್ತುಗಳಿಗೆ ಕೆಲಸವೇ ಇಲ್ಲ. ಮಳೆಯಾಗದ ಕಾರಣ ಸರಿಯಾದ ಮೇವು, ನೀರು ಸಿಗುತ್ತಿಲ್ಲ ಸಾಕುವುದು ಕಷ್ಟ. ಮಾರಾಟಕ್ಕೆ ತಂದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಇಟ್ಟುಕೊಂಡು ಏನು ಮಾಡಬೇಕು ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ಕಡಿಮೆ ದರ: ಮಾರುಕಟ್ಟೆಯಲ್ಲಿ ಎತ್ತುಗಳ ಬೇಡಿಕೆ ಕುಸಿದಿರುವುದರಿಂದ ಖರೀದಿದಾರರು ರೈತರು ನಿರೀಕ್ಷಿಸುವ ಬೆಲೆಗಿಂತ ಬಹಳ ಕಡಿಮೆ ಮೊತ್ತವನ್ನು ಮಾತ್ರ ನೀಡಲು ಮುಂದಾಗುತ್ತಿದ್ದಾರೆ. ಲಕ್ಷಣ, ಜಾತಿ ಮತ್ತು ಸಾಮರ್ಥ್ಯವಿರುವ ಎತ್ತುಗಳಿಗೂ ತಕ್ಕ ಮೌಲ್ಯ ಸಿಗುತ್ತಿಲ್ಲ. ಹೀಗಾಗಿ ಹಲವು ರೈತರು ನಷ್ಟದಲ್ಲಿ ಮಾರಾಟ ಮಾಡಲು ಮನಸ್ಸು ಮಾಡದೆ ಮನೆಗೆ ವಾಪಸಾಗುತ್ತಿದ್ದಾರೆ.
ಸರ್ಕಾರದ ನೆರವಿನ ನಿರೀಕ್ಷೆ: ಬರ ಪರಿಸ್ಥಿತಿಯಿಂದ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆ ಸರ್ಕಾರ ಮೇವು ಬ್ಯಾಂಕ್‌ಗಳನ್ನು ಆರಂಭಿಸಿ, ಜಾನುವಾರು ಸಾಕಾಣಿಕೆ ರೈತರಿಗೆ ವಿಶೇಷ ನೆರವು ನೀಡಬೇಕು. ಇಲ್ಲದಿದ್ದರೆ ರೈತರ ಬೆನ್ನೆಲುಬಾದ ಎತ್ತುಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಲಿದೆ ಎಂದು ರೈತರು ಹೇಳುತ್ತಾರೆ.
ಬರದಿಂದ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ, ಸರ್ಕಾರ ಮೇವು ಬ್ಯಾಂಕ್ ಆರಂಭಿಸಿ, ಜಾನುವಾರು ಸಾಕುವ ರೈತರಿಗೆ ನೆರವು ನೀಡಬೇಕು. ಇಲ್ಲದಿದ್ದರೆ ಇನ್ನಷ್ಟು ರೈತರು ತಮ್ಮ ಜಾನುವಾರುಗಳನ್ನು ಮಾರಬೇಕಾದ ಪರಿಸ್ಥಿತಿ ಬರಲಿದೆ ಎಂದು ರೈತ ಮಲ್ಲಪ್ಪ ಕಂಬಳಿ ತಿಳಿಸಿದ್ದಾರೆ.