ಮಳೆ ಬರ್ತಿಲ್ಲ, ತುಂಗಭದ್ರೆಯಲ್ಲೂ ನೀರಿಲ್ಲ

KannadaprabhaNewsNetwork |  
Published : Jul 31, 2026, 02:30 AM IST
1 ಫೋಟೋ ನೀರಿಲ್ಲದೆ ಒಣಗಿದ ಕಂಪ್ಲಿಯ ಕಾಲುವೆ2 ಫೋಟೋ ಬಿತ್ತನೆ ಇಲ್ಲದೆ ಬರಡಾಗಿರುವ ಭೂಮಿ 3 ಫೋಟೋ  ನಾರಾಯಣ ಸ್ವಾಮಿ, ರೈತ 4 ಫೋಟೋ ಬಿ.ವಿ.ಗೌಡ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ | Kannada Prabha

ಸಾರಾಂಶ

ಇದು ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಬಿ.ಎಚ್.ಎಂ.ಗುರುಶಾಂತಶಾಸ್ತ್ರಿ

ಕಂಪ್ಲಿ: ಒಂದು ಕಡೆ ವಾಡಿಕೆಯಷ್ಟು ಮಳೆಯಿಲ್ಲ. ಮತ್ತೊಂದು ಕಡೆ ವಿಜಯನಗರ, ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ನದಿಯಲ್ಲೂ ಸಮರ್ಪಕ ನೀರಿನ ಹರಿವಿಲ್ಲ. ಈ ಎರಡೂ ಕಾರಣಗಳಿಂದ ಕಂಪ್ಲಿ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದೆ. ಇದು ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಈ ಬಾರಿ ಎಲ್-ನಿನೋ ಪರಿಣಾಮದಿಂದ ರಾಜ್ಯದ ಹಲವೆಡೆ ಮಳೆಯ ಕೊರತೆ ಉಂಟಾಗಿದೆ. ತುಂಗಾ ಹಾಗೂ ಭದ್ರಾ ನದಿಗಳ ಜಲಾನಯನ ಪ್ರದೇಶಗಳಲ್ಲಿಯೂ ನಿರೀಕ್ಷಿತ ಮಳೆಯಾಗಿಲ್ಲ. ಇದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಕುಸಿದಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಹರಿಸಿಲ್ಲ. ಇದರಿಂದ ಕಾಲುವೆಗಳು ಸಂಪೂರ್ಣ ಬರಿದಾಗಿದ್ದು, ನೀರಿನ ನಿರೀಕ್ಷೆಯಲ್ಲಿದ್ದ ರೈತರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಆರಂಭವಾಗದ ನಾಟಿ ಕಾರ್ಯ:

ತುಂಗಭದ್ರಾ ನದಿಯ ನೀರನ್ನೇ ನಂಬಿಕೊಂಡು ನೂರಾರು ರೈತರು ಒಂದೆರಡು ತಿಂಗಳ ಹಿಂದೆಯೇ ಭತ್ತದ ಸಸಿ ಮಡಿ ಮಾಡಿಕೊಂಡಿದ್ದಾರೆ. ಜಮೀನು ಸಿದ್ಧಪಡಿಸಿ ಭತ್ತದ ನಾಟಿಗೆ ಅಗತ್ಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಕಾಲುವೆಗೆ ನೀರು ಹರಿಯದ ಕಾರಣ ನಾಟಿ ಕಾರ್ಯ ಆರಂಭಿಸಲು ಸಾಧ್ಯವಾಗಿಲ್ಲ. ಇನ್ನು ಕೆಲವೆಡೆ ಭತ್ತ ಬಿತ್ತನೆ ಮಾಡಿದ್ದು ಮಳೆ ಇಲ್ಲದೇ ಬೆಳೆ ಒಣಗುವ ಆತಂಕವಿದೆ.

ಮಳೆಯಾಶ್ರಿತ ಬೆಳೆಗಳಿಗೂ ಸಂಕಷ್ಟ:

ಕಾಲುವೆ ನೀರಿನ ಕೊರತೆಯಷ್ಟೇ ಅಲ್ಲದೆ, ಮಳೆಯಾಶ್ರಿತ ಪ್ರದೇಶಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮೆಕ್ಕೆಜೋಳ, ರಾಗಿ, ತೊಗರಿ, ಹತ್ತಿ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರು ಮಳೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲವೆಡೆ ಮೊಳಕೆಯೊಡೆದ ಬೆಳೆಗಳು ಈಗಾಗಲೇ ಒಣಗಲು ಆರಂಭಿಸಿದ್ದು, ಇನ್ನೂ ಕೆಲವು ದಿನ ಮಳೆ ಕೈಕೊಟ್ಟರೆ ಸಂಪೂರ್ಣ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ. ಹೀಗಾಗಿ ರೈತರು ಆಕಾಶದತ್ತ ಮುಖ ಮಾಡಿ ವರುಣನ ಕೃಪೆಗೆ ಕಾಯುವಂತಾಗಿದೆ.

ಅಂತರ್ಜಲ ಕುಸಿತ:

ತಾಲೂಕಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳಿದ್ದರೂ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಇದರಿಂದ ರೈತರಿಗೆ ಅಗತ್ಯ ಪ್ರಮಾಣದ ನೀರು ದೊರೆಯುತ್ತಿಲ್ಲ. ಹಲವು ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ಬೆಳೆಗಳಿಗೆ ಪೂರಕವಾಗಿ ನೀರುಣಿಸುವುದು ಕಷ್ಟಕರವಾಗಿದೆ. ಇದರಿಂದ ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೃಷಿ ಇಲಾಖೆಯ ಮಾಹಿತಿಯಂತೆ, ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 22,991 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಆದರೆ ಇದುವರೆಗೆ ಕೇವಲ 8,027 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಂಡಿದೆ. ಇದರಲ್ಲಿ 4,421 ಹೆಕ್ಟೇರ್ ಭತ್ತ, 899 ಹೆಕ್ಟೇರ್ ತೊಗರಿ, 1,054 ಹೆಕ್ಟೇರ್ ಸೂರ್ಯಕಾಂತಿ, 586 ಹೆಕ್ಟೇರ್ ಹತ್ತಿ, 694 ಹೆಕ್ಟೇರ್ ಮೆಕ್ಕೆಜೋಳ, 232 ಹೆಕ್ಟೇರ್ ಸಜ್ಜೆ, 129 ಹೆಕ್ಟೇರ್ ಕಿರುಧಾನ್ಯ, 128 ಹೆಕ್ಟೇರ್ ಜೋಳ ಹಾಗೂ 129 ಹೆಕ್ಟೇರ್ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಬಿತ್ತನೆಯಾಗಿವೆ.

ರೈತರ ಒತ್ತಾಯ:

ತುಂಗಭದ್ರಾ ಜಲಾಶಯದ ನೀರಿನ ಲಭ್ಯತೆಯನ್ನು ಪರಿಶೀಲಿಸಿ, ಸಾಧ್ಯವಾದಷ್ಟು ಬೇಗ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಹರಿಸಬೇಕು. ಬರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ವಿಶೇಷ ಪರಿಹಾರ ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟ ಸಂಭವಿಸಿದರೆ ಸಮರ್ಪಕ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೋಟ್1:

ಭತ್ತ, ಮೆಣಸಿನಕಾಯಿ ಬೆಳೆಯಲು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಬೀಜ ಖರೀದಿಸಿ ಸಸಿ ಸಿದ್ಧಪಡಿಸಿಕೊಂಡಿದ್ದೇವೆ. ಜಮೀನು ಸಿದ್ಧತೆ, ಗೊಬ್ಬರ, ಕೂಲಿ ಸೇರಿದಂತೆ ಸಾಕಷ್ಟು ಹಣ ಹೂಡಿಕೆ ಮಾಡಿದ್ದೇವೆ. ಆದರೆ ಮಳೆಯ ಕೊರತೆ ಮತ್ತು ಕಾಲುವೆಗಳಿಗೆ ನೀರು ಹರಿಯದ ಕಾರಣ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಲ್ಲಿವರೆಗೆ ಮಾಡಿದ ಹೂಡಿಕೆಯೆಲ್ಲ ವ್ಯರ್ಥವಾಗಿ, ಭಾರೀ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಲಿದೆ ಎನ್ನುತ್ತಾರೆ ರೈತ ನಾರಾಯಣ ಸ್ವಾಮಿ.

ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸರ್ಕಾರ ತಕ್ಷಣವೇ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಈಗಾಗಲೇ ಸಂಕಷ್ಟದಲ್ಲಿರುವ ರೈತರ ಮೇಲೆ ಬ್ಯಾಂಕ್ ಸಿಬ್ಬಂದಿ ಸಾಲ ವಸೂಲಾತಿ ಹೆಸರಿನಲ್ಲಿ ಒತ್ತಡ ಹಾಗೂ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಬ್ಯಾಂಕ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ವೆಂಕಟರಾಮ್ ಕಟ್ಟಿಗೆ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ
ಸಮಾಜಕ್ಕೆ ಅರ್ಪಿತವಾದ ಜೀವನವೇ ಪಾವನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು