ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕಾಗಿ ಆಗ್ರಹಿಸಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ರೈತರು ಪ್ರತಿಭಟನೆ ಮಾಡಿದರು.ಮುಂಡರಗಿ ತಾಲೂಕಿನ ಮುಂಡವಾಡ, ಹಮ್ಮಿಗಿಯ 20ಕ್ಕೂ ಹೆಚ್ಚು ರೈತರಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ರೈತ ಒಕ್ಕೂಟದ ವಿರೂಪಾಕ್ಷಪ್ಪ ಅಲ್ಲಿಪುರ, ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ನಮ್ಮ ಭಾಗದಲ್ಲಿ ಕಾಲುವೆ, ರಸ್ತೆ ಸೇರಿದಂತೆ ಇತರೆ ಕಾಮಗಾರಿಗೆ ಭೂಮಿ ಕಳೆದುಕೊಂಡು 20 ವರ್ಷ ಕಳೆದಿವೆ. ಅಲ್ಲಿಂದ ಈವರೆಗೂ ನಿರಂತರ ಹೋರಾಟ ಮಾಡುತ್ತಿದ್ದರೂ ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲ. ಯಾವಾಗ ಬಂದ್ರೂ ಜವಾನ ಮಾತ್ರ ಇರುತ್ತಾರೆ. ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ತಮ್ಮ ನೋವು ತೋಡಿಕೊಂಡರು.ಮುಂಡವಾಡ, ಹಮ್ಮಿಗಿ ಗ್ರಾಮಕ್ಕೆ ಸೇರಿದ 15 ಎಕರೆ, 16.28 ಎಕರೆ, 7.35 ಎಕರೆ ಸೇರಿದಂತೆ ಒಟ್ಟು 50 ಎಕರೆಯ 3 ಪ್ರಕರಣಗಳಿವೆ. ಇದಕ್ಕಾಗಿ ಕಚೇರಿಗೆ ಅಲೆದು ಸುಸ್ತಾಗಿದ್ದೇವೆ. ಕಾಲುವೆಗಳು ಹೂಳು ತುಂಬಿಕೊಂಡು, ಆಳು ಎತ್ತರ ಜಾಲಿ ಮುಳ್ಳಿನ ಗಿಡ-ಗಂಟೆ ಬೆಳೆದಿವೆ. ಇದರಿಂದ ಕಾಲುವೆಗೆ ನೀರು ಬರುತ್ತಿಲ್ಲ. ರೈತರು ಹಗಲು-ರಾತ್ರಿ ಹರಸಾಹಸ ಮಾಡಬೇಕಿದೆ. ಆದರೂ ರೈತರ ಜಮೀನುಗಳಿಗೆ ನೀರು ಬರುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದರು.
ನಮ್ಮ ಸಮಸ್ಯೆ ಆಲಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳೇ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಾಗ, ಹರಪನಹಳ್ಳಿ ಉಪ ವಿಭಾಗಾಧಿಕಾರಿಯೇ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ದೂರವಾಣಿ ಕರೆ ಮಾಡಿ ರೈತರು ಮಾತನಾಡಿದಾಗ ಎಸ್‌ಐಆರ್ ಸಭೆಯಲ್ಲಿದ್ದೇವೆ. ಒಂದು ಪ್ರಕರಣ ಇತ್ಯರ್ಥ ಪಡಿಸಿದ್ದೇವೆ. ಉಳಿದ 2 ಪ್ರಕರಣ ಶೀಘ್ರದಲ್ಲೇ ಬಗೆ ಹರಿಸುತ್ತೇವೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು.
ಈ ವೇಳೆ ಮಲ್ಲಿಕಾರ್ಜುನಗೌಡ ಪಾಟೀಲ್, ನಿಂಗನಗೌಡ ಪಾಟೀಲ್, ಹನುಮರಡ್ಡಿ ರಾಜೂರು, ದ್ಯಾಮಪ್ಪ, ಪಕ್ಕೀರಪ್ಪ, ಬನ್ನೆಪ್ಪ ಪೂಜಾರ ಸೇರಿದಂತೆ 20ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.