ಹುಬ್ಬಳ್ಳಿ:
ನಗರದ ಭೈರಿದೇವರಕೊಪ್ಪದಲ್ಲಿ ಗುರುವಾರ ಭಾರತೀಯ ಅಯ್ಯಪ್ಪ ಸೇವಾ ಸಂಘ ಆಯೋಜಿಸಿದ್ದ ಅಯ್ಯಪ್ಪ ಮಹಾಸಂಗಮ, ಮುತ್ತುಸ್ವಾಮಿಯವರ 18ನೇ ವರ್ಷದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಧರ್ಮವನ್ನು ರಕ್ಷಿಸಿದರೆ, ನಮ್ಮನ್ನು ಅದು ರಕ್ಷಿಸುತ್ತದೆ. ಧರ್ಮ ಪಾಲನೆ, ಪೋಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಯಾರೂ ಎಂದಿಗೂ ಅಧರ್ಮದಿಂದ ನಡೆದುಕೊಳ್ಳಬಾರದು. ದೇವರಲ್ಲಿ ಭಕ್ತಿ, ಸಮಾಜ ಸೇವೆ, ಪರರಿಗೆ ಸಹಾಯ ಮಾಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಇದರಿಂದ ಜನ್ಮ ಸಾರ್ಥಕವಾಗುತ್ತದೆ ಎಂದರು.ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಧರ್ಮಕ್ಕೆ ಮಹತ್ವದ ಸ್ಥಾನವಿದೆ. ಈ ಧರ್ಮದ ರಕ್ಷಣೆ ಮತ್ತು ಪ್ರಚಾರವನ್ನು ಹಲವು ಮಹನೀಯರು ನಡೆಸಿಕೊಂಡು ಬಂದಿದ್ದಾರೆ. ಇದನ್ನು ಪೋಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಮಾತನಾಡಿ, ನಮ್ಮದು ಆಧ್ಮಾತಿಕ ದೇಶವಾಗಿದೆ. ಹಿಂದೂ ಧರ್ಮ ಅತ್ಯಂತ ಹಳೆಯ ಧರ್ಮವೆಂದು ಹೇಳಲಾಗಿದೆ. ಇಂತಹ ಪುರಾತನ ಧರ್ಮದ ಮೇಲೆ ಅನ್ಯ ಧರ್ಮಿಗಳಿಂದ ಆಕ್ರಮಣ ಹಾಗೂ ಅವಹೇಳನ ಮಾಡುವುದು ನಡೆಯುತ್ತಲೇ ಇದೆ. ಇದಕ್ಕೆ ನಮ್ಮ ಅಲಕ್ಷ್ಯತನ ಹಾಗೂ ಅಸಂಘಟನೆಯೇ ಪ್ರಮುಖ ಕಾರಣವಾಗಿದೆ. ಇದನ್ನು ತಡೆಯಬೇಕಾದರೆ ನಾವು ಸಂಘಟಿತರಾಗಬೇಕಿದೆ ಎಂದರು.ಶಬರಿಮಲೆ ದೇವಸ್ಥಾನಕ್ಕೆ ವಾರ್ಷಿಕವಾಗಿ ಅಂದಾಜು ₹ 1.30 ಲಕ್ಷ ಕೋಟಿ ಆದಾಯ ಬರುತ್ತಿದೆ. ಆದರೆ, ದೇವರ ಹಣ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯವಾಗುತ್ತಿಲ್ಲ. ಕೇಂದ್ರ ಸರ್ಕಾರವು ಶಬರಿಮಲೆ ದೇವಸ್ಥಾನದ ನಿರ್ವಹಣೆ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೆಲವು ಮತಗಳ ಪ್ರಭಾವದಿಂದ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಮತ್ತೆ ಪುನರುಜ್ಜೀವನಗೊಳ್ಳುತ್ತಿದೆ. ಎಲ್ಲ ಧರ್ಮಗಳಿಗೆ ಗೌರವ ಕೊಡುವುದು ಹಿಂದೂ ಧರ್ಮದ ವಿಶಿಷ್ಟತೆಯಾಗಿದೆ. ಇಡೀ ಪ್ರಪಂಚವೇ ಇದನ್ನು ಮನಗಂಡಿದೆ. ಪೂರ್ವಜನ್ಮದ ಸುಕೃತ ಪುಣ್ಯದಿಂದಾಗಿ ಈ ಜನ್ಮದಲ್ಲಿ ಹಿಂದೂವಾಗಿ ಹುಟ್ಟಿದ್ದೇವೆ. ನಾವು ಗಳಿಸಿದ್ದರಲ್ಲಿ ಸಮಾಜಕ್ಕೆ ಒಂದಿಷ್ಟು ಕೊಡಬೇಕು. ಆ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.ಆನಂದ ಗುರುಸ್ವಾಮಿ, ಗೋಕುಲದ ಮೋಹನ ಗುರುಸ್ವಾಮಿ, ಸಂಪತ್ ಕುಮಾರ ಗುರುಸ್ವಾಮಿ, ನಾರಾಯಣ ಜಾಧವ ಗುರುಸ್ವಾಮಿ, ಮಣಿಸ್ವಾಮಿ, ಬಸವರಾಜ ಮಾಯಕಾರ, ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಶರಣಪ್ಪ ಕೊಟಗಿ ಸೇರಿದಂತೆ ಹಲವರಿದ್ದರು. ಭಾರತೀಯ ಅಯ್ಯಪ್ಪ ಸಂಘದ ಶಿವಾನಂದ ಬಾರ್ಕಿ ಪ್ರಾಸ್ತಾವಿಕ ಮಾತನಾಡಿದರು. ಶಿವಪುತ್ರ ಮಠಪತಿ ಸ್ವಾಗತಿಸಿದರು.
ಇದೇ ವೇಳೆ ಗುರುಸ್ವಾಮಿಗಳಿಗೆ ಭಿನ್ನವತ್ತಳೆ ಸಮರ್ಪಣೆ ಮಾಡಲಾಯಿತು. ಜಿಲ್ಲೆಯ ಹಲವು ಮಾಲಾಧಾರಿಗಳಿಗೆ ಅಯ್ಯಪ್ಪ ಸೇವಾ ರತ್ನ ನೀಡಿ ಗೌರವಿಸಲಾಯಿತು. ಉತ್ಸವ ಮೂರ್ತಿ ಮೆರವಣಿಗೆ, ಗಾಯಕರಿಂದ ಭಕ್ತಿ ಸಂಗಮ, ಮಹಾಪ್ರಸಾದ ಮುಂತಾದ ಕಾರ್ಯಕ್ರಮಗಳು ನಡೆದವು.