ಕನ್ನಡಪ್ರಭ ವಾರ್ತೆ ವಿಧಾನಸಭೆಎಲೆಕ್ಟ್ರಿಕ್, ವಾಣಿಜ್ಯ ಮತ್ತು ಹಳದಿ ಫಲಕದ ವಾಹನಗಳನ್ನು ಹೊರತುಪಡಿಸಿ ನೂತನ ವಾಹನಗಳಿಗೆ ಜೀವಮಾನ ತೆರಿಗೆ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕವೂ ಬುಧವಾರ ಸದನದಲ್ಲಿ ಅಂಗೀಕಾರಗೊಂಡಿತು. ಬುಧವಾರ ಸಚಿವ ರಾಮಲಿಂಗಾರೆಡ್ಡಿ ಈ ವಿಧೇಯಕವನ್ನು ಮಂಡಿಸಿದರು. ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿಧಿಸಬಾರದು. ಅವುಗಳಿಗೆ ಸಬ್ಸಿಡಿ ನೀಡಬೇಕು ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯ ಆರ್.ವಿ.ದೇಶಪಾಂಡೆ ಕೂಡ ಇದಕ್ಕೆ ಬೆಂಬಲಿಸಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಹಾಕಬಾರದು ಎಂದು ಸಲಹೆ ಮಾಡಿದರು.ಹೀಗಾಗಿ ಸಚಿವ ರಾಮಲಿಂಗಾರೆಡ್ಡಿ ಅದನ್ನು ತಿದ್ದುಪಡಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕವಷ್ಟೇ ಅದಕ್ಕೆ ಅಂಗೀಕಾರವಾಯಿತು.