ಮಾಗಡಿ: ಪಟ್ಟಣದ ಪುರಸಭೆ ಕಾರ್ಯಾಲಯದ ಮುಂದಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲಿ ಪೌರಕಾಮಿರ್ಕರಿಗಾಗಿ ವಿಶ್ರಾಂತಿ ಹಾಗೂ ಶೌಚಗೃಹ ನಿರ್ಮಿಸಲು ಮುಂದಾಗಿರುವ ಪುರಸಭೆ ಅಧಿಕಾರಿಗಳ ಕ್ರಮಕ್ಕೆ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ತಾಪಂ ಮಾಜಿ ಅಧ್ಯಕ್ಷ ಚಂದೂರಾಯನಹಳ್ಳಿ ಕೃಷ್ಣ ಮಾತನಾಡಿ, ಮಾಜಿ ಶಾಸಕರಾದ ಎ.ಮಂಜುನಾಥ್ ಸುಮಾರು ೧೬ ಲಕ್ಷ ರು. ವೆಚ್ಚದಲ್ಲಿ, ಗೃಹ ಸಚಿವರಾಗಿದ್ದ ಡಾ. ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಮಹಾತ್ಮರ ಪ್ರತಿಮೆಗಳ ಪಕ್ಕದಲ್ಲಿ ಅವರ ಸಾಧನೆಗಳನ್ನು ಬಿಂಬಿಸುವ ಗ್ರಂಥಾಲಯ, ಸಸಿ ನೆಟ್ಟು ಉದ್ಯಾನವನ ಮಾಡುವುದು ಅಥವಾ ವಿಶ್ರಾಂತಿ ಆಸನಗಳನ್ನು ಅಳವಡಿಸುವುದು ಸೂಕ್ತ. ಅದನ್ನು ಬಿಟ್ಟು ಪ್ರತಿಮೆಯ ಪಕ್ಕದಲ್ಲೇ ಶೌಚಾಲಯ ನಿರ್ಮಿಸಲು ಮುಂದಾಗಿರುವುದು ಇಡೀ ಸಮಾಜಕ್ಕೆ ಹಾಗೂ ಸಂವಿಧಾನ ಶಿಲ್ಪಿಗೆ ಮಾಡುತ್ತಿರುವ ಅಪಮಾನ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.
ದಲಿತ ಮುಖಂಡ ಸಿ.ಜಯರಾಂ ಮಾತನಾಡಿ, ಕೆಂಪೇಗೌಡರ ಪ್ರತಿಮೆಯನ್ನು ಹೈಕೋರ್ಟ್ ಆದೇಶದ ಅನ್ವಯ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ನಾವು ಕೋರ್ಟ್ ಆದೇಶಕ್ಕೆ ಗೌರವ ನೀಡಿ ಅಂದು ಸುಮ್ಮನಿದ್ದೆವು. ಆದರೆ ಅದನ್ನೇ ನಮ್ಮ ದೌರ್ಬಲ್ಯ ಎಂದು ಭಾವಿಸಿ, ಈಗ ಯಾರಿಗೂ ಮಾಹಿತಿ ನೀಡದೆ, ಕೌನ್ಸಿಲ್‌ನಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೆ ತರಾತುರಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುಂಡಿ ತೆಗೆಯುತ್ತಿರುವುದು ಖಂಡನೀಯ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಆಕ್ಷೇಪ ವ್ಯಕ್ತಪಡಿಸಿ, ಪುರಸಭೆ ಮ್ಯಾನೇಜರ್ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ವಾಯುಸೇನೆ ನಿವೃತ್ತ ಅಧಿಕಾರಿ ಶಿವಲಿಂಗಯ್ಯ, ರೈತ ಮುಖಂಡ ಶಿವಲಿಂಗಯ್ಯ, ಎನ್‌ಇಎಸ್ ಆನಂದ್, ಸೈಯ್ಯದ್, ದೊಡ್ಡಿ ಗೋಪಿ, ರಮೇಶ್, ಹೇಮಂತ್, ರಾಮಣ್ಣ, ಮೋಹನ್, ಜೀವಿಕ ಗಂಗಹನುಮಯ್ಯ ಇತರರು ಉಪಸ್ಥಿತರಿದ್ದರು.
ಮಾಗಡಿಯ ಪುರಸಭೆ ಮುಂಭಾಗದ ಆವರಣದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲಿ ಪೌರಕಾರ್ಮಿಕರಿಗಾಗಿ ವಿಶ್ರಾಂತಿ ಹಾಗೂ ಶೌಚಗ್ರಹ ನಿರ್ಮಾಣ ಸ್ಥಗಿತಗೊಳಿಸುವಂತೆ ಎಚ್.ಎಂ.ಕೃಷ್ಣಮೂರ್ತಿ ಹಾಗೂ ದಲಿತ ಮುಖಂಡರು ಮನವಿ ಸಲ್ಲಿಸಿದರು.