ಬಡತನ ಕಲಿಸುವ ಪಾಠ ಯಾವ ವಿವಿಯೂ ಕಲಿಸಲ್ಲ: ದೊಡ್ಡಣ್ಣ

KannadaprabhaNewsNetwork | Published : Oct 18, 2023 1:01 AM

ಸಾರಾಂಶ

ಜಾಥಾಕ್ಕೆ ಚಾಲನೆ ನೀಡಿದ ರಂಗಕರ್ಮಿ ಕಾಂತೇಶ್ ಕದರಮಂಡಲಗಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾನಿಲಯವೂ ಕಲಿಸುವುದಿಲ್ಲ. ಮಹಿಳೆಯರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು. ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ರಂಗದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಈ ಮಟ್ಕಕ್ಕೆ ಬಂದಿದ್ದೇನೆ ಎಂದರೆ ನನ್ನ ತಾಯಿಯೇ ಕಾರಣ ಎಂದರು. ಶಿವಮೊಗ್ಗದಲ್ಲಿ ನಡೆಯುವ ದಸರಾ ಅತ್ಯಂತ ಸಂಭ್ರಮದ್ದಾಗಿದೆ. ಅದರಲ್ಲೂ ರಂಗದಸರಾವನ್ನು ವಿಶೇಷವಾಗಿ ಮಾಡಿರುವುದು ಅತ್ಯಂತ ಶ್ಲಾಘನೀಯ. ಶಿವಮೊಗ್ಗ ದಸರಾ ಹೀಗೆಯೇ ಮುಂದುವರಿದು ಮೈಸೂರು ದಸರಾದಂತೆ ವಿಶ್ವವಿಖ್ಯಾತಿ ಪಡೆಯಲಿ ಎಂದು ಆಶಿಸಿದರು. ನಾಟಕಕ್ಕೆ ತನ್ನದೇ ಆದ ಒಂದು ವಿಶೇಷ ಗಮ್ಮತ್ತಿದೆ. ನಾಟಕಕ್ಕೆ ತನ್ನದೇ ಆದ ಶಕ್ತಿ ಇದೆ. ಅದು ಕಲಿತವರನ್ನು, ಕಲಿಯದವರನ್ನೂ ಕರೆಯುತ್ತದೆ. ಹೃದಯ ತಟ್ಟುತ್ತದೆ. ಅದಕ್ಕೊಂದು ಸಮ್ಮೋಹನ ಶಕ್ತಿ ಇದೆ. ಕಾವ್ಯಗಳಲ್ಲಿಯೇ ನಾಟಕ ಅತಿ ರಮ್ಯವಾದುದು. ನಾವು ನಾಟಕಗಳಿಂದಲೇ ಬೆಳೆದು ಈ ಮಟ್ಟಕ್ಕೆ ಬಂದಿದ್ದೇವೆ. ರಂಗಭೂಮಿ ಪ್ರೀತಿ, ಸಾಮರಸ್ಯ, ಸಮಾನತೆಯನ್ನು ಕಲಿಸುತ್ತದೆ ಎಂದರು. ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆಗೆ 100 ವರ್ಷ ತುಂಬಲಿದೆ. ಮೈಸೂರು ಮಹಾರಾಜರ ಕೊಡುಗೆ ಅದು. ನಾನು ಇಲ್ಲಿ 4ನೇ ದರ್ಜೆ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ ಎಂಬುದೇ ನನಗೆ ಹೆಮ್ಮೆಯಾಗಿದೆ. ಮೈಸೂರು ಮಹಾರಾಜರು ಕೇವಲ ದಸರಾವನ್ನು ನೀಡಲಿಲ್ಲ. ಸಣ್ಣಕ್ಕಿ ತಿನ್ನಲು ಅವಕಾಶ ಮಾಡಿಕೊಟ್ಟವರು ಎಂದರು. ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಆವರಣದಿಂದ ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ ಮಾರ್ಗವಾಗಿ ಕುವೆಂಪು ರಂಗಮಂದಿರದವರೆಗೆ ರಂಗಜಾಥಾ ನಡೆಯಿತು. ಮೆರವಣಿಗೆಯಲ್ಲಿ ರಂಗಕಲಾವಿದರು ವಿವಿಧ ವೇಷಭೂಷಣದೊಂದಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು. ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ರಂಗಜಾಥಾಕ್ಕೆ ಚಾಲನೆ ನೀಡಿದ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಂತೇಶ್ ಕದರಮಂಡಲಗಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಉಮೇಶ್ ಹಾಲಾಡಿ, ರಂಗದಸರಾ ಸಮಿತಿ ಅಧ್ಯಕ್ಷ ಎಸ್.ಜಿ. ರಾಜು ಸೇರಿದಂತೆ ಹಲವರಿದ್ದರು. ತಡಬಾಗಿ ಬಂದ ಶಾಸಕ- ದೊಡ್ಡಣ್ಣ ಕೋಪ: ದಸರಾ ಅಂಗವಾಗಿ ಹಮ್ಮಿಕೊಂಡಿದ್ದ ರಂಗ ದಸರಾ ಉದ್ಘಾಟನೆಗೆ ಆಗಮಿಸಿದ್ದ ಚಲನಚಿತ್ರ ನಟ ದೊಡ್ಡಣ್ಣ ಶಿವಮೊಗ್ಗ ನಗರ ಶಾಸಕ ಎಸ್‌.ಎನ್‌. ಚನ್ನಬಸಪ್ಪ ವಿರುದ್ಧ ಗರಂ ಆದ ಘಟನೆ ನಡೆಯಿತು. ಕುವೆಂಪು ರಂಗಮಂದಿರದಲ್ಲಿ ದೊಡ್ಡಣ್ಣ ಬಂದರೂ ಶಾಸಕರು ಇನ್ನೂ ಬಂದಿರಲಿಲ್ಲ. ಸಕ್ರೆಬೈಲಿನ ಕಾರ್ಯಕ್ರದಲ್ಲಿದ್ದ ಶಾಸಕರಿಗೆ ಪೋನ್‌ ಮಾಡಿದರೂ ಕಾಲ್‌ ರಿಸೀವ್‌ ಮಾಡಲಿಲ್ಲ. ಇದರಿಂದ ಕ್ಷಣಕಾಲ ಸಿಟ್ಟಿಗೆದ್ದ ದೊಡ್ಡಣ್ಣ ಅದೆಲ್ಲ ನನಗೆ ಗೊತ್ತಿಲ್ಲ. ಶಾಸಕರು ಈ ಕೂಡಲೇ ಬರಬೇಕು. ನಾವೇಕೆ ಬಂದಿದ್ದೇವೆ ಎಂದು ಸಿಡುಕಿದರು. ಅಲ್ಲಿದ್ದವರು ಅವರನ್ನು ಸಮಾಧಾನಪಡಿಸಿ ವೇದಿಕೆಗೆ ಕರೆದೊಯ್ದರು. ವೇದಿಕೆ ಕಾರ್ಯಕ್ರಮ ಶುರುವಾದ ಬಳಿಕ ಶಾಸಕ ಎಸ್‌.ಎನ್‌.ಚನ್ನಬಸಪ್ಪ ವೇದಿಕೆಗೆ ಆಗಮಿಸಿದರು. ಅವರನ್ನು ಕಂಡ ದೊಡ್ಡಣ್ಣ ಶಾಸಕರು ಬಂದಿದ್ದಾರೆ. ಅವರಿಗೆ ಅಭಿನಂದನೆ. ಅವರು 100 ವರ್ಷ ಚೆನ್ನಾಗಿರಲಿ ಎಂದು ಆರೈಸಿ ಶಾಸಕರ ಮೇಲಿದ್ದ ಸಿಟ್ಟನ್ನು ತೋರ್ಪಡಿಸಿದರು. - - - ಬಾಕ್ಸ್‌-1 ದಸರಾ ಮೆರವಣಿಗೆ: ಗಜಪಡೆಗೆ ಪಾಲಿಕೆ ಆಹ್ವಾನ ಶಿವಮೊಗ್ಗ: ಶಿವಮೊಗ್ಗ ದಸರಾದ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಯಲ್ಲಿ ಪಾಲ್ಗೊಳ್ಳುವ ಸಕ್ರೆಬೈಲಿನ ಮೂರು ಆನೆಗಳಿಗೆ ಮಂಗಳವಾರ ಪಾಲಿಕೆ ಮೇಯರ್ ನೇತೃತ್ವದಲ್ಲಿ ಆನೆ ಬಿಡಾರಕ್ಕೆ ತೆರಳಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಕ್ರೆಬೈಲು ಬಿಡಾರದ ಸಾಗರ, ನೇತ್ರಾವತಿ ಮತ್ತು ಹೇಮಾವತಿ ಹೆಸರಿನ ಆನೆಗಳಿಗೆ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಬಾಳೆಹಣ್ಣು, ಕಬ್ಬು ಹಾಗೂ ಸಿಹಿ ತಿನ್ನಿಸಿ ಅಲಂಕಾರ ಮಾಡಿ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಮಹಾನಗರ ಪಾಲಿಕೆಯ ಮಹಿಳಾ ಸದಸ್ಯರು ಎಲ್ಲ ಆನೆಗಳಿಗೆ ಅರಿಶಿಣ, ಕುಂಕುಮ ಹಚ್ಚಿ ಪುಷ್ಪನಮನ ಸಲ್ಲಿಸಿದರು. ಆನೆಗಳು ಕೂಡ ಸಂಭ್ರಮದಿಂದ ಶಾಸಕ ಎಸ್‌.ಎನ್.ಚನ್ನಬಸಪ್ಪ ಮತ್ತು ಮೇಯರ್ ಶಿವಕುಮಾರ್ ಹಾಗೂ ಎಲ್ಲಾ ಪಾಲಿಕೆ ಸದಸ್ಯರಿಗೆ ಸೊಂಡಿಲು ಎತ್ತಿ ಗೌರವ ಸೂಚಿಸಿದವು. ಇದೇ ಸಂದರ್ಭ ಮೆರವಣಿಗೆಗೆ ಪಾಲಿಕೆ ವತಿಯಿಂದ ಆನೆಗಳಿಗೆ ಮತ್ತು ಕಾವಾಡಿಗರಿಗೆ ಹಾಗೂ ಅರಣ್ಯ ಇಲಾಖೆಗೆ ಆಮಂತ್ರಣವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್, ಜ್ಞಾನೇಶ್ವರ್, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟೆಗಾರ್, ವೈದ್ಯರಾದ ಡಾ.ವಿನಯ್, ಆರ್‌ಎಫ್‍ಒ ವಿನಯ್ ಹಾಗೂ ಪಾಲಿಕೆ ಉತ್ಸವ ಸಮಿತಿ ಅಧ್ಯಕ್ಷ ಯು.ಎಚ್. ವಿಶ್ವನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಸುವರ್ಣಾ ಶಂಕರ್, ಸುನೀತಾ ಅಣ್ಣಪ್ಪ, ಕಲ್ಪನಾ ರಾಮು, ಭಾನುಮತಿ ವಿನೋದ್ ಶೇಟ್, ಇ. ವಿಶ್ವಾಸ್, ಯಮುನಾ ರಂಗೇಗೌಡ, ರೇಖಾರಂಗನಾಥ್, ಪ್ರಭು, ಆರತಿ ಆ.ಮಾ. ಪ್ರಕಾಶ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು. - - - ಬಾಕ್ಸ್‌-2 ಹಳೇ ಸಿನಿಮಾಗಳು ಅವಿಸ್ಮರಣೀಯ: ಈಶ್ವರಪ್ಪ ಶಿವಮೊಗ್ಗ: ಹಳೆಯ ಚಲನಚಿತ್ರಗಳಲ್ಲಿ ಮಧುರ ಗೀತೆಗಳು ಮತ್ತು ಅದರ ಸಾಹಿತ್ಯ ಹಾಗೂ ಚಿತ್ರಕಥೆ, ನಿರ್ದೇಶನ ಎಲ್ಲವೂ ಅವಿಸ್ಮರಣೀಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ದಸರಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಇಡೀ ಕುಟುಂಬದೊಂದಿಗೆ ಚಿತ್ರಗಳನ್ನು ನೋಡಬಹುದಿತ್ತು. ಈಗಿನ ಚಿತ್ರಗಳು ಕೂಡ ಅದೇ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಈ ಕಾರ್ಯಾಗಾರದಿಂದ ಶಿವಮೊಗ್ಗದಿಂದಲೇ ಅತ್ಯುತ್ತಮ ಯುವ ಸಾಹಿತಿಗಳು, ಗಾಯಕರು, ನಿರ್ದೇಶಕರು ಪ್ರಯೋಜನ ಪಡೆಯಲಿ ಎಂದು ಆಶಿಸಿದರು. ಕರ್ಕಶವಾದ ಸಂಗೀತ, ಸಾಹಿತ್ಯವಿಲ್ಲದ ಗೀತೆಗಳು, ಅದರ ಹೊರತಾಗಿ ನಮ್ಮ ಸಾಂಸ್ಕøತಿಕ ಮೆರುಗನ್ನು ಹೆಚ್ಚಿಸುವ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳು ಮತ್ತು ಚಿತ್ರಗೀತೆಗಳು ಬರಬೇಕಾಗಿದೆ. ಹಳೆಯ ಹಾಡುಗಳು ಇಂದಿಗೂ ಜೀವಂತವಾಗಿವೆ. ಹೊಸ ಚಿತ್ರಗಳ ಗೀತೆಗಳು ಬೇಗನೆ ಮರೆಯಾಗುತ್ತವೆ ಎಂದ ಅವರು, ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅನುಭವೀ ಸಾಹಿತಿಗಳು ಇದ್ದಾರೆ. ಅವರಿಂದ ಮಾಹಿತಿ ಪಡೆದು ಅಳವಡಿಸಿಕೊಳ್ಳಿ ಎಂದರು. ಮೊದಲ ಅವಧಿಯಲ್ಲಿ ಚಲನಚಿತ್ರ ಮತ್ತು ಸಾಹಿತ್ಯದ ಬಗ್ಗೆ ಚಿಂತಕರಾದ ಶಾಂತಾರಾಂ ಪ್ರಭು, ಎರಡನೇ ಅವಧಿಯಲ್ಲಿ ಚಲನಚಿತ್ರ ಮತ್ತು ಕಿರುಚಿತ್ರ ನಿರ್ಮಾಣದ ಬಗ್ಗೆ ಡಿ. ಸತ್ಯಪ್ರಕಾಶ್, ಚಲನಚಿತ್ರ ಛಾಯಾಗ್ರಹಣದ ಬಗ್ಗೆ ಹೆಸರಾಂತ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಮತ್ತು ನಾಲ್ಕನೆ ಅವಧಿಯಲ್ಲಿ ಹಾಡು ಹುಟ್ಟಿದ ಬಗೆ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಸ್. ಶ್ರೀಧರ ಮೂರ್ತಿ ಅವರಿಂದ ಉಪನ್ಯಾಸ ನಡೆಯಿತು. ವೇದಿಕೆಯಲ್ಲಿ ಶ್ರೀಧರಮೂರ್ತಿ, ಶಾಂತಾರಾಂ ಪ್ರಭು, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಯು.ಎಚ್. ವಿಶ್ವನಾಥ್, ಮಂಜುನಾಥ್, ಶಂಕರ್, ವೈದ್ಯನಾಥ್ ಮತ್ತಿತರರು ಇದ್ದರು. - - - ಬಾಕ್ಸ್‌-2 ಕುಡೋ ಮಾರ್ಷಲ್‌ ಆರ್ಟ್ಸ್‌ ಪಂದ್ಯಾವಳಿಗೆ ಚಾಲನೆ ಶಿವಮೊಗ್ಗ: ಪಾಲಿಕೆ ವತಿಯಿಂದ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಸಮಿತಿಯಿಂದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 6ರಿಂದ 16ನೇ ವಯಸ್ಸಿನ ಮಕ್ಕಳ ಕುಡೋ ಮಾರ್ಷಲ್ ಆಟ್ರ್ಸ್ ಪಂದ್ಯಾವಳಿ ಉದ್ಘಾಟನೆಯನ್ನು ಉಪ ಮೇಯರ್ ಲಕ್ಷ್ಮೀ ಶಂಕರ ನಾಯಕ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾನುಮತಿ ವಿನೋದ್‍ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಬಿ. ಲೋಕೇಶ್, ಯುವ ಮುಖಂಡ ಎಂ. ರಾಹುಲ್, ಕುಡೋ ಮಾರ್ಷಲ್ ಆಟ್ರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಅಹ್ಮದ್ ಹಾಗೂ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ ತರಬೇತುದಾರರು ಉಪಸ್ಥಿತರಿದ್ದರು. - - - -17ಎಸ್‌ಎಂಜಿಕೆಪಿ03: ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ದಸರಾ ಅಂಗವಾಗಿ ನಡೆದ ರಂಗ ದಸರಾವನ್ನು ಚಲನಚಿತ್ರ ನಟ ದೊಡ್ಡಣ್ಣ ಉದ್ಘಾಟಿಸಿದರು. -17ಎಸ್‌ಎಂಜಿಕೆಪಿ04: ಶಿವಮೊಗ್ಗ ದಸರಾ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜ ಪಡೆಗೆ ಮಹಾನಗರ ಪಾಲಿಕೆಯಿಂದ ವಿಶೇಷ ಪೂಜೆ ಸಲ್ಲಿಸಿ, ಆಹ್ವಾನ ನೀಡಲಾಯಿತು. - 17ಎಸ್‌ಎಂಜಿಕೆಪಿ05: ಶಿವಮೊಗ್ಗ ದಸರಾ ಅಂಗವಾಗಿ ಆಯೋಜಿಸಿದ್ದ ರಂಗ ದಸರಾ ಮೆರವಣಿಗೆಗೆ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಂತೇಶ್ ಕದರಮಂಡಲಗಿ ಚಾಲನೆ ನೀಡಿದರು.

Share this article