ಕನಕಗಿರಿ:
ಎಂಟತ್ತು ವರ್ಷಗಳಿಂದ ತಿಪ್ಪನಾಳ ಗ್ರಾಮದ ೨೫ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ೮ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಬೃಹತ್ ಕೆರೆ ನಿರ್ಮಿಸಲಾಗಿತ್ತು. ಇಲ್ಲಿಂದ ಕನಕಗಿರಿ, ಕನ್ನೇರಮಡು, ಸೋಮಸಾಗರ, ಹುಡೇಜಾಲಿ, ರಾಂಪುರ, ಮುಸಲಾಪೂರ, ಬಂಕಾಪುರ ಹಾಗೂ ತಿಪ್ಪನಾಳ ಗ್ರಾಮಗಳಿಗೆ ನೀರು ಪೂರೈಸಬೇಕೆಂಬುದು ಈ ಯೋಜನೆಯ ಉದ್ದೇಶವಾಗಿದೆ. ಕೇಸರಹಟ್ಟಿ, ನಾಗಲಾಪೂರ ಹಾಗೂ ತಿಪ್ಪನಾಳ ಜಾಕವೆಲ್‌ನಲ್ಲಿ ಕೆಲಸ ಮಾಡುವ ೬ ಜನ ನೀರಗಂಟಿಗಳಿಗೆ ಗುತ್ತಿಗೆದಾರರು ವೇತನ ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ನೀರಗಂಟಿಗಳು ಕೆಲಸಕ್ಕೆ ಹೋಗದೆ ಇರುವುದರಿಂದ ಎಂಟು ಗ್ರಾಮಗಳಿಗೆ ನೀರು ಸರಬರಾಜು ಬಂದ್ ಆಗಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ವೇತನ ನೀಡುವಂತೆ ಕೇಳಿದರೆ ಕೊಡುತ್ತೇವೆ. ನೀವು ಕೆಲಸ ಮಾಡುವುದನ್ನು ಕಲಿಯಿರಿ ಎಂದು ನೀರಗಂಟಿಗಳಿಗೆ ಗುತ್ತಿಗೆದಾರರು ಗದುರಿಸುತ್ತಾರೆ ಎನ್ನಲಾಗಿದೆ. ಕಳೆದ ವಾರದಿಂದ ನೀರು ಸರಬರಾಜು ಮಾಡದೆ ಇರುವುದರಿಂದ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ನೀರು ಪೂರೈಸುವಂತೆ ಆಗ್ರಹಿಸುತ್ತಿರುವ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.ನೀರಗಂಟಿಗಳ ವೇತನ ಪೂರೈಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಗುತ್ತಿಗೆದಾರರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳುತ್ತೇನೆ.
ದೇವಣ್ಣ ಕಟ್ಟಿ ಎಇಇ ಗಂಗಾವತಿ