ಅಹಿಂದ ಸಂಘಟನೆಯನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ, ಜನಜಾಗೃತಿಗಾಗಿ ಮಾಡಲಾಗುತ್ತಿದೆ. ಅಹಿಂದ ವರ್ಗ ಸರ್ಕಾರದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹುಬ್ಬಳ್ಳಿ: ಅಹಿಂದ ಸಂಘಟನೆಯನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ, ಜನಜಾಗೃತಿಗಾಗಿ ಮಾಡಲಾಗುತ್ತಿದೆ. ಅಹಿಂದ ವರ್ಗ ಸರ್ಕಾರದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಹಿಂದ ಹೋರಾಟ ಸಾಧನೆ, ಸಂಕಲ್ಪ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
20 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಈ ನೆನಪು ಮುಂದಿಟ್ಟುಕೊಂಡು ಏನೆಲ್ಲ ಬದಲಾವಣೆಯಾಗಿದೆ, ಏನೇನು ಆಗಬೇಕು ಎನ್ನುವುದನ್ನು ಚಿಂತಿಸಬೇಕು. ಇದು ನಾನು ಮುಖ್ಯಮಂತ್ರಿಯಾಗಬೇಕು, ಅಧಿಕಾರ ಹೊಂದಬೇಕು ಎನ್ನುವ ರಾಜಕೀಯ ಕಾರ್ಯಾಗಾರವಲ್ಲ. ನಮ್ಮ ನ್ಯೂನತೆ, ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಅದಕ್ಕಾಗಿ ಸಲಹೆ-ಸೂಚನೆಗಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದು ಒಂದು ರೀತಿಯಲ್ಲಿ ಅಹಿಂದ ವರ್ಗದ ಎರಡನೆಯ ಹಂತದ ಹೋರಾಟ. ಆದರೆ, ಈ ಹೋರಾಟ ಜನಜಾಗೃತಿ ಮೂಲಕ ಮಾಡಲಾಗುತ್ತಿದೆ ಎಂದರು.
ಹೋರಾಟದ ಸ್ವರೂಪ ಬದಲು
ನಮ್ಮ ಸರ್ಕಾರ ಇದ್ದರೂ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಎಂಬ ಮಾತು ಸಹಜವಾಗಿಯೇ ಕೇಳಿ ಬರುತ್ತಿದೆ. ಆದರೆ ನಮ್ಮ ಸರ್ಕಾರದಲ್ಲಿ ಇರುವವರೇ ಕೆಲವರು ಭರವಸೆ ಈಡೇರಿಸಲು ಬಿಡುತ್ತಿಲ್ಲ ಎಂದು ಜಾರಕಿಹೊಳಿ ವಿಷಾಧಿಸಿದರು.
ಈ ಅವಧಿಯಲ್ಲಿ ಸಾಕಷ್ಟು ಕಲಿತಿದ್ದೇವೆ, ಹೋರಾಟದ ಸ್ವರೂಪ ಬದಲಿಸಿಕೊಳ್ಳಬೇಕಿದೆ. ರಾಜಕೀಯ, ಸಾಮಾಜಿಕ ನ್ಯಾಯದ ಬಗ್ಗೆ ತಿಳಿದುಕೊಳ್ಳಬೇಕು. ಸಾಕಷ್ಟು ಸಭೆ, ಸಮಾವೇಶ ನಡೆಸಿದರೂ ಬದಲಾವಣೆ ಸಾಧ್ಯವಾಗಿಲ್ಲ. ಅಹಿಂದಕ್ಕೆ ಶಕ್ತಿ ನೀಡಿದ ಹುಬ್ಬಳ್ಳಿಯಲ್ಲೇ 2ನೇ ಹಂತದ ಹೋರಾಟ ಆರಂಭಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಜಾಗೃತಿ ಹಮ್ಮಿಕೊಳ್ಳಲಾಗುವುದು. ಅದಕ್ಕೆ ರಾಜಕೀಯ ನಾಯಕರನ್ನು ಕರೆಸದೇ ವಿದ್ವಾಂಸರನ್ನು ಕರೆಸಿ ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಇದು 2028ರ ಮೇ ವರೆಗೂ ನಡೆಯಲಿದೆ ಎಂದು ತಿಳಿಸಿದರು.
ಸಂವಿಧಾನ ರಕ್ಷಿಸಿ
ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಮಾತನಾಡಿ, ದೇಶದಲ್ಲಿ 4635 ಜಾತಿ, ಉಪಜಾತಿಗಳಿವೆ. ಜಾತಿ ವ್ಯವಸ್ಥೆಯಲ್ಲಿ ಮೇಲು, ಕೆಳಗೆ ಎನ್ನುವ ಭಿನ್ನಭಾವ ಸಾಮಾಜಿಕ ವ್ಯವಸ್ಥೆಯಾಗಿ ಬದಲಾಗಿದೆ. ಅನಕ್ಷರಸ್ಥರು, ನಿರುದ್ಯೋಗಿಗಳು ಹೆಚ್ಚು ಇರುವುದು ಕೆಳವರ್ಗದಲ್ಲಿ ಮಾತ್ರ. ಇದರ ವಿರುದ್ಧ ಸಾಕಷ್ಟು ಮಹಾಪುರುಷರು ಧ್ವನಿ ಎತ್ತಿದರು ಎಂದರು.
ಇಂದು ಉದ್ಭವಿಸುತ್ತಿರುವ ಸಮಸ್ಯೆ, ಸವಾಲುಗಳಿಗೆ ಸಂವಿಧಾನ ಕಾರಣ ಎಂದು ಒಂದು ವರ್ಗ ಹೇಳುತ್ತಿದೆ. ಸಂವಿಧಾನ ಸರಿಯಿಲ್ಲವಾದರೆ ಬದಲಾಗಿ ಏನು ನೀಡುತ್ತೀರಿ? ಅದಕ್ಕೆ ಬದಲಾಗಿ ಪಂಚಾಂಗ ತಂದು ಇಡುತ್ತಾರೆಯೇ? ಈ ಮಧ್ಯೆ ನಾವೆಲ್ಲ ಸಂವಿಧಾನ ರಕ್ಷಿಸಬೇಕಿದೆ. ಮಹಿಳಾ ಮೀಸಲಾತಿಗೆ ಯಾರ ವಿರೋಧವೂ ಇಲ್ಲ. ಈ ಹಿಂದೆಯೇ ಅದನ್ನು ಪಾರ್ಲಿಮೆಂಟ್‌ಗೆ ತಂದು ಒಪ್ಪಿಗೆ ಪಡೆಯಲಾಗಿತ್ತು. ಈಗ ಮತ್ತೆ ಏಕೆ ಪಾರ್ಲಿಮೆಂಟ್‌ಗೆ ತಂದರು? ಅದರ ಜತೆ ಕ್ಷೇತ್ರ ಮರುವಿಂಗಡಣೆ ತಂದಿದ್ದರು. ಅದಕ್ಕಾಗಿ ವಿರೋಧ ವ್ಯಕ್ತವಾಗುತ್ತಿದೆ. ಮೊದಲು ಅಂತರಂಗದಲ್ಲಿ ಹೋರಾಟ ನಡೆಸಿ, ನಂತರ ರಣರಂಗದಲ್ಲಿ ಹೋರಾಡಬೇಕು. ವಿಜ್ಞಾನ, ತಂತ್ರಜ್ಞಾನ ಬಳಸಿಕೊಂಡು ಹೋರಾಟದ ಸ್ವರೂಪ ಬದಲಿಸಬೇಕು ಎಂದರು.
ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಅಹಿಂದ ಎಂದರೆ ಹೋರಾಟ, ಸ್ವಾಭಿಮಾನ, ಸಮಾನತೆಯ ಸಂಕೇತ. ಇದಕ್ಕೆ ಶಕ್ತಿ ತುಂಬಿದ್ದೇ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ. ಎಲ್ಲ ವರ್ಗದವರನ್ನು ಸೇರಿಸಿಕೊಂಡು ಹೋರಾಡಬೇಕು. ಕಾಂಗ್ರೆಸ್ ಸರ್ಕಾರ ಎಲ್ಲ ಸಮಾಜದ ಏಳ್ಗೆಗೆ ಶ್ರಮಿಸುತ್ತಿರುವ ಪಕ್ಷ. ನಾವೆಲ್ಲರೂ ಒಂದಾಗಿ ಹೋರಾಡುವ ಮೂಲಕ ಸಮಾಜದ ಶಕ್ತಿ ತೋರಿಸುವ ಕಾರ್ಯವಾಗಬೇಕಿದೆ ಎಂದರು.
ಈ ವೇಳೆ ಅಹಿಂದ ಮುಖಂಡರಾದ ಪ್ರೊ. ಪ್ರದೀಪ ರಾಮಾವತ್, ಡಾ. ರಾಜಾ ನಾಯಕ, ಚಂದ್ರಶೇಖರ, ದಾನಪ್ಪ ಕಬ್ಬೇರ, ಪಾಂಡುರಂಗ ಪಮ್ಮಾರ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಯಾಸೀರಖಾನ್ ಪಠಾಣ, ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ರಾಹುಲ್ ಜಾರಕಿಹೊಳಿ, ವಿನೋದ ಅಸೂಟಿ, ಅಲ್ತಾಫ ಕಿತ್ತೂರ, ಕೆ. ರಾಮಚಂದ್ರಪ್ಪ ಸೇರಿದಂತೆ ಅಹಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಬಸವಣ್ಣನ ವಿರುದ್ಧ ಮಾತು
ಕೆಲವರು ಇಂದು ಬಸವಣ್ಣನ ವಿರುದ್ಧ ಮಾತನಾಡುವ ಚಾಳಿ ರೂಢಿಸಿಕೊಂಡಿದ್ದಾರೆ. ಅಂತಹ ಮಹನೀಯರನ್ನೇ ವಿರೋಧಿಸುತ್ತಾರೆ ಎಂದರೆ ನಾವೆಲ್ಲ ಯಾವ ಲೆಕ್ಕ? ಬಸವಣ್ಣನೇ ಇಲ್ಲ, ಕೇವಲ ಕಾಲ್ಪನಿಕ ಎಂದರೆ ಏನು ಮಾಡುತ್ತೀರಿ? ನೀವೆಲ್ಲ ಸುಮ್ಮನಿರದೆ ವಿರೋಧಿಸಬೇಕು. ಸಾಮೂಹಿಕವಾಗಿ ಅದಕ್ಕೆ ಉತ್ತರ ನೀಡಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ವಿಚಾರ ಸಂಕಿರಣದ ನಿರ್ಣಯಗಳು
- ರಾಜ್ಯದಲ್ಲಿ ಶೇ. 98ರಷ್ಟು ಹುದ್ದೆಗಳು ಖಾಸಗಿ ಕ್ಷೇತ್ರದಲ್ಲಿ ಇರುವುದರಿಂದ ಖಾಸಗಿ ವಲಯಕ್ಕೂ ಮೀಸಲಾತಿ ವಿಸ್ತರಿಸಬೇಕು.- ಶೇ. 32ರಷ್ಟು ಇರುವ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಳ ಮಾಡಬೇಕು. ಶೇ. 15 ಇರುವ ಪರಿಶಿಷ್ಟ ಮೀಸಲಾತಿಯನ್ನು ಶೇ. 18ಕ್ಕೆ ಹೆಚ್ಚಳ ಮಾಡಬೇಕು.
- ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗದವರಿಗೂ ರಾಜಕೀಯ ಮೀಸಲಾತಿ ನೀಡಬೇಕು.- ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಗಣತಿಯನ್ನು ಸೇರಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.
- ಅಹಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯ ಆಧಾರಿತ ತರಬೇತಿ ನೀಡಬೇಕು.- ಅಹಿಂದ ಸಮುದಾಯದ ವಸತಿ ರಹಿತರಿಗೆ ತಕ್ಷಣ ವಸತಿ ಸೌಲಭ್ಯ ಕಲ್ಪಿಸಬೇಕು.
- ಕೇಂದ್ರ ಸರ್ಕಾರದ ಉದ್ಯೋಗಗಳ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳ ಒಳಮೀಸಲಾತಿ ಜಾರಿಗೆ ತರಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.