ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕಿನ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಕನಕಪುರ ತಾಲೂಕಿನಲ್ಲಿ 5 ಸೆಂಟಿ ಮೀಟರ್ , ಮಾಗಡಿ ತಾಲೂಕಿನಲ್ಲಿ 3 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ ಅಕ್ಟೋಬರ್ 9ರಂದು 10 ಮಿ.ಮೀ ವಾಡಿಕೆ ಮಳೆಗೆ 7 ಮಿ.ಮೀ ವಾಸ್ತವ ಮಳೆಯಾಗಿದ್ದು, ಶೇಕಡ 51ರಷ್ಟು ಮಳೆಯಾಗಿದೆ. ಅಕ್ಟೋಬರ್ 10ರಂದು ವಾಡಿಕೆಗಿಂತ ಹೆಚ್ಚುವರಿ ಮಳೆ ಸುರಿದಿದೆ.ವರುಣನ ಅಬ್ಬರಕ್ಕೆ ಹತ್ತಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದ್ದು, ತೆಂಗಿನ ಮರ, ರಾಗಿ , ಬಾಳೆ, ಮುಸುಕಿನ ಜೋಳ ಬೆಳೆಗಳು ಹಾನಿಯಾಗಿ ನೆಲ ಕಚ್ಚಿವೆ. ಗದ್ದೆಗಳು ಕೆರೆಯಂತಾಗಿವೆ. ಹಸುಗಳಿಗೆ ಮೇವು ಕುಯ್ಯಲು ಸಾಧ್ಯವಾಗದೇ ರೈತರು ಪರದಾಡುತ್ತಿದ್ದಾರೆ.
ನಗರದ ಹೊರವಲಯದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ, ಕಿಲೋಮೀಟರ್‌ನಷ್ಟು ದೂರ ವಾಹನಗಳ ದಟ್ಟಣೆ ಕಂಡುಬಂತು. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.
ಮಳೆ ನೀರು ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗಬೇಕು. ಆದರೆ, ಕೆಲವೆಡೆ ನೀರು ಹರಿದು ಹೋಗುವ ತೂತುಗಳಲ್ಲಿ ಕಸ ಕಟ್ಟಿಕೊಂಡಿರುವುದರಿಂದ ನೀರು ಸಂಗ್ರಹಗೊಂಡಿತು. ಕೆಲವೆಡೆ ತೀರಾ ತಗ್ಗು ಪ್ರದೇಶವಿರುವುದರಿಂದ ಎಲ್ಲಾ ನೀರು ಅಲ್ಲಿಗೇ ಬಂದು ಸೇರಿಕೊಂಡಿತು. ಇದರಿಂದಾಗಿ ಕೆಲವೆಡೆ ರಸ್ತೆ ಜಲಾವೃತವಾಯಿತು.
ನಗರದೊಳಗೆ ನಿರಂತರ ನೀರು ಕುಡಿಯುವ ಯೋಜನೆಗಾಗಿ ರಸ್ತೆ ಅಗೆದಿರುವ ರಸ್ತೆಗಳು ಮಳೆಯಿಂದಾಗಿ ಕೆಸರಿನ ಗದ್ದೆಗಳಾದವು. ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ವಾಹನಗಳ ಸಂಚಾರವಿರಲಿ, ಪಾದಚಾರಿಗಳು ಸಹ ನಡೆದುಕೊಂಡು ಹೋಗಲು ಪರದಾಡಬೇಕಾಯಿತು. ಗಾಳಿಯ ಅಬ್ಬರಕ್ಕೆ ಕೆಲವೆಡೆ ಮರಗಳು, ಕೊಂಬೆಗಳು ಬಿದ್ದಿರುವ ವರದಿಯಾಗಿದೆ. ಮಳೆ ಕಾರಣಕ್ಕೆ ಹಲವೆಡೆ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾಯಿತು.
ರಾಮನಗರ: ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತೊಂದರೆಗೀಡಾದ ಜಿಲ್ಲಾ ಕೇಂದ್ರ ರಾಮನಗರದ ಹಲವು ವಾರ್ಡುಗಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವಿಷಯ ತಿಳಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿಯವರು ಅಧಿಕಾರಿಗಳೊಂದಿಗೆ ಗಾಂದಿನಗರ ಸ್ಲಂ ಕಾಲೋನಿ ಮತ್ತು ಕಾಯಿಸೊಪ್ಪಿನ ಬೀದಿಗೆ ಭೇಟಿ ನೀಡಿ, ಕಾಲೋನಿಯಲ್ಲಿ ಚರಂಡಿಯಲ್ಲಿ ಕೆಸರು ತುಂಬಿದ್ದರಿಂದ ಮಳೆ ನೀರು ಮನೆಯೊಳಗೆ ನುಗ್ಗಿರುವುದನ್ನು ಕಂಡ ಕೆ.ಶೇಷಾದ್ರಿಯವರು ಕೂಡಲೇ ಚರಂಡಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು.
ಜಿಯಾವುಲ್ಲಾ ಬ್ಲಾಕ್ ನ ಮಹಬೂಬ್ ನಗರದಲ್ಲಿ ದೊಡ್ಡ ಚರಂಡಿ ಕಟ್ಟಿಕೊಂಡಿದ್ದು, ಸೇತುವೆ ಮಳೆ ನೀರಿನ ರಭಸಕ್ಕೆ ಕೊರೆದಿರುವುದನ್ನು ವೀಕ್ಷಣೆ ಮಾಡಿದರು. ಬಳಿಕ ಕೊತ್ತಿಪುರ, ಟಿಪ್ಪುನಗರ ಬಡಾವಣೆಗಳಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳನ್ನು ಪರಿಶೀಲಿಸಿದ ಅಧ್ಯಕ್ಷರು, ರಸ್ತೆಗಳ ದುರಸ್ಥಿಗೆ ಕ್ರಮ ವಹಿಸುವುದಾಗಿ ಜನರಿಗೆ ಭರವಸೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಗೋವಿಂದರಾಜು, ಸೋಮಶೇಖರ್ , ಎಇಇ ವಿಶ್ವನಾಥ್ , ಪರಿಸರ ಅಭಿಯಂತರ ಸುಬ್ರಹ್ಮಣ್ಯ, ನಿರೀಕ್ಷಕ ವಿಜಯ್ ಕುಮಾರ್ , ಆರ್ ಐ ನಾಗರಾಜು ಮತ್ತಿತರರು ಹಾಜರಿದ್ದರು.