ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಿನ್ಸ್ ರಾಯ್ ಪಾರ್ಕಿಂಗ್ ಸೆಲ್ಯೂಷನ್ ಸಂಸ್ಥೆ ಬಹುಮಹಡಿ ವಾಹನ ತಾಣವನ್ನು 10 ವರ್ಷದ ನಿರ್ವಹಣೆಗೆ ಗುತ್ತಿಗೆ ಪಡೆದುಕೊಂಡಿದ್ದು, ಪ್ರತಿ ವರ್ಷ ಬಿಬಿಎಂಪಿಗೆ ₹1.5 ಕೋಟಿ ಪಾವತಿ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದೆ. ₹8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದೆ. ಕಳೆದ ಜೂನ್‌ನಲ್ಲಿ ಉದ್ಘಾಟನೆಗೊಂಡಿತ್ತು.
ವಾಹನ ಪಾರ್ಕಿಂಗ್ ತಾಣದಲ್ಲಿ ಶೌಚಾಲಯ, ಉಚಿತ ವೈಫೈ ಸೌಲಭ್ಯ ಸೇರಿದಂತೆ ಹಲವು ಸೇವೆಗಳನ್ನು ನೀಡಲಾಗುತ್ತಿದೆ. ಆದರೂ ಹೆಚ್ಚಿನ ಸಂಖ್ಯೆ ವಾಹನಗಳ ನಿಲುಗಡೆ ಆಗಮಿಸುತ್ತಿಲ್ಲ. ದಿನಕ್ಕೆ 40 ರಿಂದ 50 ಕಾರು ಮಾತ್ರ ಪಾರ್ಕಿಂಗ್ ಆಗುತ್ತಿವೆ. ಇದರಿಂದ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಹೀಗಾಗಿ, ಬಹುಮಹಡಿ ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್, ಗೋದಾಮು ಹಾಗೂ ವಾಣಿಜ್ಯ ಚಟುವಟಿಕೆ ನಡೆಸುವುದಕ್ಕೆ ಅನುಮತಿ ಕೊಟ್ಟರೆ ಬಿಬಿಎಂಪಿಗೆ ವಾರ್ಷಿಕ ಬಾಡಿಗೆ ಮೊತ್ತ ಪಾವತಿಸುವುದಕ್ಕೆ ಅನುಕೂಲವಾಗಲಿದೆ ಎಂದು ಪ್ರಿನ್ಸ್ ರಾಯ್ ಪಾರ್ಕಿಂಗ್ ಸೆಲ್ಯೂಷನ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್.ಕುಮಾರ್ ಅವರು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.