ಚಿತ್ರದುರ್ಗ: ಮಹಾತ್ಮಾ ಗಾಂಧಿಯ ವಿಚಾರಗಳನ್ನು ಓದದೇ ಅವರನ್ನು ಟೀಕೆ ಮಾಡುವುದು ಸಲ್ಲವೆಂದು ಬೆಂಗಳೂರಿನ ಗಾಂಧಿ ಭವನದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿದರು.
ಇಂದು ಗಾಂಧಿಯ ವ್ಯಕ್ತಿ ದರ್ಶನ ಸಾಧ್ಯವಿಲ್ಲ. ಆದರೆ ಅವರ ವಿಚಾರ ದರ್ಶನ ಇಂದಿಗೂ ಸಾಧ್ಯವಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ವಿಚಾರಕ್ಕಾಗಿ ಬದುಕಬೇಕು, ಆಲೋಚನೆ ಮಾಡಬೇಕು. ಪದವಿ ಪಡೆದರೆ ಪ್ರಯೋಜನವಿಲ್ಲ, ವಿಷಯವನ್ನು ಜ್ಞಾನಕ್ಕೆ ಬದಲಾಯಿಸಿಕೊಂಡು ಅದಕ್ಕೆ ಶಕ್ತಿ ತುಂಬುವಂತಹ ಕೆಲಸ ಮಾಡಬೇಕು. ಜಾತೀಯತೆ ಮತ್ತು ಮತೀಯ ಬೇಧ ಭಾವಗಳ ವಿರುದ್ಧ ಮಹಾತ್ಮ ಗಾಂಧಿ ಅವರು ಜೀವಮಾನವಿಡೀ ಹೋರಾಡಿದರು. ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು ಎಂದರು.
ಜಾತಿಯ ಪಿಡುಗು ಇಂದು ನಮ್ಮನ್ನು ಕಿತ್ತು ತಿನ್ನುತ್ತಿದೆ. ಭ್ರಷ್ಟಮುಕ್ತ ಸಮಾಜ ನಿರ್ಮಾಣ ಮಾಡಬೇಕಾದರೆ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ರೂಢಿಸಿಕೊಳ್ಳಬೇಕು. ತಾಂತ್ರಿಕತೆ ಭರಾಟೆಯಲ್ಲಿ ಮನುಷ್ಯ ಸಂಬಂಧಗಳು ನಾಶವಾಗುತ್ತಿವೆ. ಪ್ರಕೃತಿಯೊಂದಿಗಿನ ಸಂಬಂಧ ಕಳೆದುಕೊಳ್ಳುತ್ತಿದ್ದೇವೆ. ಆಹಾರ ಸಂಸ್ಕೃತಿ ಕಳೆದುಕೊಂಡರೆ ಸಂಸ್ಕೃತಿಯನ್ನೇ ತ್ಯಜಿಸಿದಂತೆ. ಸಾಮಾಜಿಕ ಜಾಲತಾಣಗಳು ಯುವ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ಮುಳುಗಿದ್ದು, ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದರು.ಗಾಂಧಿ ಮಾದರಿ ವಕೀಲರಾಗಿದ್ದರು. ಅವರ ಆಟೋಬಯೊಗ್ರಫಿ ಬಗ್ಗೆ ಮುಖ್ಯವಾಗಿ ಕಾನೂನು ವಿದ್ಯಾರ್ಥಿಗಳು ಓದಲೇಬೇಕು. ಈ ಪುಸ್ತಕ ಓದಿದರೆ ಗಾಂಧಿ ಅವರ ಸೂಕ್ಷ್ಮ ಪರಿಚಯವಾಗಲಿದೆ. ಭಾರತ ಸರಕಾರ ಪ್ರಕಟಿಸಿರುವ ದಿ ಕಲೆಕ್ಟೆಡ್ ವಕ್ರ್ಸ್ ಆಫ್ ಮಹಾತ್ಮಗಾಂಧಿ ಪುಸ್ತಕ ಗಾಂಧೀಜಿವರ ಬದುಕನ್ನು ತೆರೆದಿಡುತ್ತದೆ. ಜಗತ್ತಿನಲ್ಲಿ ಈವರೆಗೆ ಯಾವ ವ್ಯಕ್ತಿಯ ಜೀವನದ ಬಗ್ಗೆಯೂ ಇಲ್ಲದಷ್ಟು ವಿಚಾರಗಳು ಗಾಂಧಿಯ ಬಗ್ಗೆ ಈ ಪುಸ್ತಕದಲ್ಲಿವೆ. ಅಂತಹ ಅಭೂತಪೂರ್ವ ವ್ಯಕ್ತಿತ್ವವನ್ನು ಗಾಂಧಿ ಹೊಂದಿದ್ದರು ಎಂದರು.
ಕರ್ನಾಟಕದಲ್ಲಿ ಗಾಂಧಿ ವಿಷಯ ಕುರಿತು ವೇಮಗಲ್ ಸೋಮಶೇಖರ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಅವರ ತತ್ವಗಳನ್ನು ಅನುಸರಿಸೋಣ. ಅವರಂತೆ ಆಲೋಚನೆ ಮಾಡೋಣ, ಸ್ವದೇಶಿ ತತ್ವ ಪಾಲಿಸಿ ಸ್ವಾವಲಂಬಿಗಳಾಗಿ ಬದುಕೋಣ ಎಂದರು.