ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲ್ಲ

KannadaprabhaNewsNetwork |  
Published : Jun 24, 2025, 12:32 AM IST
ಬಾಲಚಂದ್ರ ಜಾರಕಿಹೊಳಿ | Kannada Prabha

ಸಾರಾಂಶ

ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೆ ಎಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೆ ಎಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಹಾಲು ಒಕ್ಕೂಟದಿಂದ ಕರ್ನಾಟಕ ಹಾಲು ಮಹಾಮಂಡಳಿಗೆ ನಿರ್ದೇಶಕನಾಗಿ ಆಯ್ಕೆಯಾಗುತ್ತೇನೆ. ಆದರೆ, ಖಂಡಿತವಾಗಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ. 3 ವರ್ಷ ಕೆಎಂಎಫ್ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ತೃಪ್ತಿ ಮತ್ತು ಹೆಮ್ಮೆ ನನಗಿದೆ. ರಾಜ್ಯದಲ್ಲಿರುವ ನಮ್ಮೆಲ್ಲ ಹೈನುಗಾರರಿಗೆ ಸಂಸ್ಥೆಯಿಂದ ಸಾಕಷ್ಟು ಪ್ರಯೋಜನಗಳನ್ನು ದೊರಕಿಸಿಕೊಟ್ಟಿದ್ದೇನೆ. ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರದಿಂದ ಶ್ರಮಿಸಿದ್ದೇನೆ. ನಾನು ಅಧ್ಯಕ್ಷನಿದ್ದ ಸಂದರ್ಭದಲ್ಲಿ ವಾರ್ಷಿಕ ₹೧೫ ಸಾವಿರ ಕೋಟಿಯಿಂದ ₹೨೦ ಸಾವಿರ ಕೋಟಿ ರುಪಾಯಿವರೆಗೆ ವಹಿವಾಟನ್ನು ಮಾಡಿರುವ ಸಾಧನೆ ನನಗೆ ತೃಪ್ತಿ ತಂದಿದೆ ಎಂದು ತಿಳಿಸಿದರು.ರಾಜ್ಯದಲ್ಲಿರುವ ಎಲ್ಲ ೧೪ ಜಿಲ್ಲಾ ಹಾಲು ಒಕ್ಕೂಟಗಳ ಪ್ರಗತಿಗೂ ಸಹ ಪ್ರಾಮಾಣಿಕವಾಗಿ ದುಡಿದಿದ್ದೇನೆ. ರಾಜ್ಯದಲ್ಲಿ ಬಿಜೆಪಿ ನಂತರ ಅಧಿಕಾರಕ್ಕೆ ಏರಿದ ಕಾಂಗ್ರೆಸ್ ಪಕ್ಷವು‌ ನನ್ನ ತರುವಾಯ ಭೀಮಾ ನಾಯಿಕ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿತು. ಆ ನಂತರದ ಬೆಳವಣಿಗೆಯಲ್ಲಿ ಕೆಎಂಎಫ್ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡು ಕೇವಲ ಬೆಳಗಾವಿ ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಅದರಲ್ಲೂ ಅಕ್ಟೋಬರ್‌ ತಿಂಗಳಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮತ್ತೇ ತಮ್ಮ ಮುಂದಾಳುತನದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವತ್ತ ನನ್ನ ಚಿತ್ತ ಇದೆ ಎಂದು ತಿಳಿಸಿದರು.ಕೆಎಂಎಫ್ ಅಧ್ಯಕ್ಷರು ಯಾರೂ ಬೇಕಾದರೂ ಆಗಲಿ. ನಾನೇನೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷನಾಗಿದ್ದುಕೊಂಡು ಕೆಎಂಎಫ್ ನಿರ್ದೇಶಕನಾಗಿ ಪುನರಾಯ್ಕೆಯಾಗುತ್ತೇನೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ನನ್ನ ಗುರಿ ಇರುವುದು ಬೆಮುಲ್ ಮೇಲೆ. ಇದನ್ನು ರಾಜ್ಯದಲ್ಲಿಯೇ ದೊಡ್ಡ ಸಂಸ್ಥೆಯನ್ನಾಗಿ ಮಾಡುವುದೇ ಮುಖ್ಯ ಕನಸು ಆಗಿದೆ. ರೈತರ ಸಹಕಾರದಿಂದ ಬೆಮುಲ್ ಅಭಿವೃದ್ಧಿಯನ್ನು ಮಾಡಿ ಅದನ್ನು ಮಾದರಿಯನ್ನಾಗಿ ಮಾಡುವ ಸಂಕಲ್ಪ ಮಾಡಿರುವೆ ಎಂದು ತಿಳಿಸಿದರು.ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಂಸತ್ ಸದಸ್ಯ ಡಿ.ಕೆ.ಸುರೇಶ್ ಅವರು ಬೆಂಗಳೂರು ಜಿಲ್ಲಾ ಹಾಲು ಒಕ್ಕೂಟವನ್ನು ಪ್ರವೇಶ ಮಾಡುತ್ತಿದ್ದಂತೆಯೇ ಎಲ್ಲರ ಚಿತ್ತ ಬೆಳಗಾವಿ ರಾಜಕಾರಣದತ್ತ ವಾಲುತ್ತಿದೆ. ಡಿ.ಕೆ.ಸುರೇಶ್ ಅವರ ಎದುರಾಳಿಯಂತೆ ನನ್ನನ್ನು ಕೆಲ ಮಾಧ್ಯಮಗಳು ಬಿತ್ತರಿಸುತ್ತಿವೆ. ಆದರೆ, ಇನ್ನೆರಡು ತಿಂಗಳಲ್ಲಿ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯ ಆಕಾಂಕ್ಷಿಯೂ ಅಲ್ಲ. ಸ್ಪರ್ಧೆ ಮಾಡುವ ಯಾವ ಇರಾದೆಯೂ ನನ್ನ ಮುಂದೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವದಲ್ಲಿರುತ್ತದೆಯೋ ಅದರ ಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ವಾಡಿಕೆಯಾಗಿದೆ. ಕೆಎಂಎಫ್ ಆಗಲಿ, ಅಪೆಕ್ಸ್ ಬ್ಯಾಂಕ್ ಆಗಲಿ ಮತ್ತು ಮಾರ್ಕೆಟಿಂಗ್ ಫೆಡರೇಷನ್ ಆಗಲಿ, ಅವುಗಳಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದ ಬೆಂಬಲ ಇದ್ದೇ ಇರುತ್ತದೆ. ಹೀಗಾಗಿ ಈ 3 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗರೇ ಅಧಿಕಾರದಲ್ಲಿರುತ್ತಾರೆ. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನದ

ಸ್ಪರ್ಧೆಯಲ್ಲಿ ನಾನಿರಲಾರೆ. ಮುಂದೆ ನಮ್ಮ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಂದ ಮೇಲೆ ಖಂಡಿತವಾಗಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ.

-ಬಾಲಚಂದ್ರ ಜಾರಕಿಹೊಳಿ, ಶಾಸಕರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು