ಮಾಸಿಕ ಪ್ರವಾಸ ವರದಿ ಸಲ್ಲಿಸದಿದ್ದರೆ ನೋಟಿಸ್‌: ಸಂಸದ ತುಕಾರಾಂ

KannadaprabhaNewsNetwork | Published : Jan 21, 2025 12:32 AM

ಸಾರಾಂಶ

ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಜಿಲ್ಲೆ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ.

ಹೊಸಪೇಟೆ: ವಾರದೊಳಗೆ ಪ್ರವಾಸ ವರದಿ ಸಲ್ಲಿಕೆ ಮಾಡದಿದ್ದರೆ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಲು ಸಂಸದ ಈ. ತುಕಾರಾಂ ತಾಕೀತು ಮಾಡಿದರು.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ತಹಸಿಲ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಸೇವಾ ನಿಯಮಾವಳಿ ಅನ್ವಯ ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಪಂ ಅಧಿಕಾರಿಗೆ ಮಾಸಿಕ ಪ್ರವಾಸ ವರದಿ ಸಲ್ಲಿಸಬೇಕು. ಆದರೆ, ಜಿಲ್ಲೆಯಲ್ಲಿ ಈ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಬೆರಳೆಣಿಕೆ ಅಧಿಕಾರಿಗಳು ಮಾತ್ರ ಸಲ್ಲಿಕೆ ಮಾಡಿದ್ದಾರೆ ಎಂದರು.

ಜಿಲ್ಲೆಯ ತಾಲೂಕು, ಹೋಬಳಿ, ಹಳ್ಳಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಜಿಲ್ಲೆ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಇಲಾಖೆಯಲ್ಲಿನ ಲೋಪದೋಷಗಳು ಕೂಡ ಅಧಿಕಾರಿಗಳಿಗೆ ತಿಳಿಯದಾಗಿದೆ. ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ಶೇ.5 ಅಧಿಕಾರಿಗಳು ಮಾತ್ರ ಜಿಪಂ ಅಧಿಕಾರಿಗೆ ಕಾರ್ಯಸೂಚಿ ಸಲ್ಲಿಸುತ್ತಿದ್ದಾರೆ. ಯಾರೂ ಸಲ್ಲಿಸುವುದಿಲ್ಲವೋ ಅವರಿಗೆ ನೋಟಿಸ್‌ ಜಾರಿ ಮಾಡಲು ಸೂಚಿಸಿದರು.ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌, ಜಿಲ್ಲೆಯ ಅಧಿಕಾರಿಗಳಿಗೆ ಈ ವಿಷಯವಾಗಿ ಪದೇಪದೇ ಹೇಳಿದರೂ ಕೇಳುತ್ತಿಲ್ಲ. ಯಾವುದೇ ಮುಲಾಜಿಲ್ಲದೇ ನೋಟಿಸ್‌ ಜಾರಿ ಮಾಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿಗೆ ಸೂಚಿಸಿದರು.

ಡಿಎಚ್‌ಒಗೆ ಶಹಬ್ಬಾಸ್‌ ಗಿರಿ:

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್‌.ಆರ್‌. ಶಂಕರ್‌ ನಾಯ್ಕ ಸಭೆಗೆ ಉತ್ತಮವಾಗಿ ವರದಿ ಸಲ್ಲಿಸಿದ್ದಾರೆ. ಇಲಾಖೆಯ ಪ್ರಗತಿ ವರದಿ ಮತ್ತು ಅನುಪಾಲನಾ ವರದಿಯನ್ನು ಟಿಪ್ಪಣಿ ಅನುಸಾರ ನೀಡಿದ್ದಾರೆ. ನಿಜಕ್ಕೂ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಸಭೆಯಲ್ಲಿ ಶಹಬ್ಬಾಸ್‌ ಗಿರಿ ನೀಡಿದರು.

ಶಾಲೆ, ಅಂಗನವಾಡಿ ಕೇಂದ್ರ, ಪಿಎಚ್‌ಸಿಗಳಿಗೆ ಜಾಗ ಕೊಡಿ:

ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಜಾಗ ಕೊಡಬೇಕು. ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಜಾಗ ಕೊಡಬೇಕು. ಮಹಿಳಾ- ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು, ನಗರಸಭೆ, ಪುರಸಭೆ, ಪಪಂ, ತಾಪಂ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜಾಗ ಪಡೆದುಕೊಳ್ಳಬೇಕು. ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ ಎಸ್‌. ಉತ್ತರಿಸಿದರು.

ಮೀನುಗಾರಿಕೆ, ಪಶು ಇಲಾಖೆ, ರೇಷ್ಮೆ ಇಲಾಖೆಯಲ್ಲಿ ಭಾರೀ ಸಮಸ್ಯೆಗಳಿವೆ. ಪಶು ಇಲಾಖೆಯ ಅಧಿಕಾರಿ ಪೋಮ್‌ ಸಿಂಗ್‌ ಸಭೆಯಲ್ಲಿ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಹಂದಿಗಳು ಎಷ್ಟಿವೆ ಎಂದರೆ ಗೊತ್ತಿಲ್ಲ. ಅವರಿಗೆ ನೋಟಿಸ್‌ ಜಾರಿ ಮಾಡಬೇಕು ಎಂದು ಸೂಚಿಸಿದರು.

ಮರಿಯಮ್ಮನಹಳ್ಳಿ-ಶಿವಮೊಗ್ಗ ಚತುಷ್ಪಥ ರಸ್ತೆ:

ಮರಿಯಮ್ಮನಹಳ್ಳಿ - ಹಗರಿಬೊಮ್ಮನಹಳ್ಳಿ- ಹರಪನಹಳ್ಳಿ- ಹರಿಹರ- ಶಿವಮೊಗ್ಗದವರೆಗೆ ರಾ.ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಒತ್ತಾಯಿಸಲಾಗಿದೆ. ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಸಂಸದರ ನಿಯೋಗ ತೆರಳಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಬಳಿಯೂ ಒತ್ತಾಯಿಸಲಾಗುವುದು. ಸಿಎಂ ಸಿದ್ದರಾಮಯ್ಯ ಕೇಂದ್ರ ಹೆದ್ದಾರಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ 23,766 ಬಾಲಕ, ಬಾಲಕಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 4902 ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. 2000ಕ್ಕೂ ಅಧಿಕ ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ ಎಂದು ಡಿಡಿಪಿಐ ವೆಂಕಟೇಶ್‌ ರಾಮಚಂದ್ರಪ್ಪ ಸಭೆಗೆ ತಿಳಿಸಿದರು.

ಸಂಸದ ತುಕಾರಾಂ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ವಿಶೇಷ ಪುಸ್ತಿಕೆ ಮಾಡಿಸಬೇಕು. ಅದರ ಮುದ್ರಣ ಖರ್ಚು ನಾನೇ ಭರಿಸುವೆ. ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳನ್ನು ಕೂಡ ಶಾಲೆಗೆ ಕರೆ ತಂದು ಓದಿಸಬೇಕು. ಒಟ್ಟಿನಲ್ಲಿ ಉತ್ತಮ ಫಲಿತಾಂಶ ಕೊಡಬೇಕು ಎಂದರು. ಶಾಸಕ ಕೃಷ್ಣ ನಾಯ್ಕ, ಡಿಎಫ್‌ಒ ಅರ್ಸಲನ್‌, ಎಎಸ್ಪಿ ಸಲೀಂ ಪಾಷಾ ಸೇರಿದಂತೆ ಮತ್ತಿತರರಿದ್ದರು.

Share this article