ಲಕ್ಷ್ಮೇಶ್ವರ: ತಾಲೂಕಿನ ಪ್ರಮುಖ ರಸ್ತೆಗಳು ಹಾಳಾಗಿ ಹೋಗಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲಿ ಅವುಗಳನ್ನು ದುರಸ್ತಿ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿ ಹೋಗಿವೆ. ಇದರಿಂದ ನಮಗೆ ಸಾಕಷ್ಟು ಹಿಂಸೆಯಾಗುತ್ತಿದೆ. ಗದಗ ಲಕ್ಷ್ಮೇಶ್ವರ ರಸ್ತೆ ಕಿತ್ತು ಹೋಗಿ ಹಲವು ವರ್ಷ ಕಳೆದರೂ ದುರಸ್ತಿ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದೆ. ಗೊಜನೂರು ಹತ್ತಿರ ರಸ್ತೆಯ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಮಳೆಗಾಲ ಆರಂಭವಾಗಿದ್ದರಿಂದ ಡಾಂಬರ್ ಹಾಕುವ ಕಾಮಗಾರಿಯನ್ನು ಅಕ್ಟೋಬರ್ ನಂತರ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.ಶಿಕ್ಷಣ ಇಲಾಖೆಯ ಶಾಲಾ ಕಟ್ಟಡಗಳು ಹಾಗೂ ಶೌಚಾಲಯಗಳು ಕುರಿತು ಬಿಇಒ ಎಚ್.ಎನ್. ನಾಯಕ್ ಅವರು ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಲಕ್ಷ್ಮೇಶ್ವರ ತಾಲೂಕಿನಲ್ಲಿ ಯಾವುದೇ ಕಟ್ಟಡ ದುರಸ್ತಿ ಕಾಮಗಾರಿ ನಡೆಯುತ್ತಿಲ್ಲ. ಪು.ಬಡ್ನಿ ಪ್ರೌಢಶಾಲೆಯಲ್ಲಿ ನಿರ್ಮಾಣವಾಗಿರುವ ಪಿಂಕ್ ಶೌಚಾಲಯವನ್ನು ಶೀಘ್ರದಲ್ಲಿ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಿಕೊಂಡು ವಿದ್ಯಾರ್ಥಿನಿಯರ ಉಪಯೋಗಕ್ಕೆ ನೀಡಬೇಕು ಹಾಗೂ ಅರ್ಧಗೊಂಡಿರುವ ಇನ್ನೊಂದು ಶೌಚಾಲಯವನ್ನು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ನೀಡುವ ಕಾರ್ಯ ಮಾಡಬೇಕು. ಗೊಜನೂರಿನ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯ ಕಟ್ಟಡಕ್ಕೆ ಬೇಕಾದ ಸಂಪೂರ್ಣ ವಿವರ ತರಿಸಿಕೊಂಡು ನಮಗೆ ನೀಡಿದಲ್ಲಿ ಅದಕ್ಕೆ ಬೇಕಾದ ಅನುದಾನ ತರುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ವಸತಿ ನಿಲಯಗಳ ಪ್ರಗತಿ ಪರಿಶೀಲನೆ ನಡೆಸಿದರು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಅಂಗನವಾಡಿ ಕಟ್ಟಡಗಳ ಕುರಿತು ಮಾಹಿತಿ ಪಡೆದುಕೊಂಡು ಅಂಗನವಾಡಿ ಕಟ್ಟಡಗಳಿಗೆ ಬೇಕಾಗಿರುವ ಜಾಗದ ಕುರಿತು ವಿಚಾರಣೆ ನಡೆಸಿದರು.ಹೆಸ್ಕಾಂ, ಸಾರಿಗೆ, ಕೃಷಿ, ನಿರ್ಮಿತಿ, ಆಹಾರ ಮತ್ತು ನಾಗರಿಕ ಪೂರೈಕೆಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ. ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಈ ವೇಳೆ ಲಕ್ಷ್ಮೇಶ್ವರ ತಾಲೂಕು ನೋಡಲ್ ಅಧಿಕಾರಿ ಎಂ.ವಿ. ಚಳಗೇರಿ ಹಾಗೂ ತಾಪಂ ಇಒ ಕೃಷ್ಣಪ್ಪ ಧರ್ಮರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.